ಪ್ರಸ್ತುತ ಹವಾನಿಯಂತ್ರಿತವಲ್ಲದ ಬಸ್‌'ನ ಪಾಸ್'ಅನ್ನು ₹800 ರಿಂದ ₹250ಕ್ಕೆ ಇಳಿಸಲಾಗುತ್ತದೆ ಮತ್ತು ಹವಾನಿಯಂತ್ರಿತ ಬಸ್ ಪಾಸ್ ₹1,000ಕ್ಕೆ ದೊರೆಯಲಿದೆ.
ನವದೆಹಲಿ(ಡಿ.21): ಸಾರ್ವಜನಿಕರು ಸರ್ಕಾರಿ ಸಾರಿಗೆ ವ್ಯವಸ್ಥೆ ಉಪಯೋಗಿಸುವಂತೆ ಉತ್ತೇಜಿಸುವ ಸಲುವಾಗಿ ಬಸ್ ಪ್ರಯಾಣ ದರದ ಶೇ.75ರಷ್ಟು ರಿಯಾಯತಿ ನೀಡಲು ದೆಹಲಿಯ ಆಮ್ ಆದ್ಮಿ ಸರ್ಕಾರ ನಿರ್ಧರಿಸಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಹೊಸ ವರ್ಷಕ್ಕೆ ದೆಹಲಿ ಜನತೆಗೆ ಬಂಪರ್ ಉಡುಗೊರೆ ನೀಡಿದೆ. ಜನವರಿ ತಿಂಗಳಿನಿಂದ ಹವಾನಿಯಂತ್ರಿತವಲ್ಲದ ಮತ್ತು ಕ್ಲಸ್ಟರ್ ಬಸ್ಗಳ ಪ್ರಯಾಣ ದರ ಕೇವಲ ₹5 ಇರಲಿದ್ದು, ಹವಾನಿಯಂತ್ರಿತ ಬಸ್'ಗಳಲ್ಲಿ ಪ್ರಯಾಣಿಸ ಬಯಸುವ ಗ್ರಾಹಕರಿಗೆ ₹10 ಪ್ರಯಾಣದರ ವಿಧಿಸಲು ಸರ್ಕಾರ ಮುಂದಾಗಿದೆ.
ಅಲ್ಲದೆ, 21 ವರ್ಷದೊಳಗಿನ ವಿದ್ಯಾರ್ಥಿಗಳು, ವಿಧವೆಯರು ಮತ್ತು ಹಿರಿಯ ನಾಗರಿಕರಿಗೆ ಉಚಿತ ಬಸ್ ಪಾಸ್ ವಿತರಣೆಗೂ ಸರ್ಕಾರ ಚಿಂತನೆ ನಡೆಸಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಹಿಳೆಯರ ಪ್ರಯಾಣ ಪಾಸ್'ಗೆ ಶೇ.75ರಷ್ಟು ರಿಯಾಯತಿಗೂ ನಿರ್ಧರಿಸಲಾಗಿದ್ದು, ಪ್ರಸ್ತುತ ಹವಾನಿಯಂತ್ರಿತವಲ್ಲದ ಬಸ್'ನ ಪಾಸ್'ಅನ್ನು ₹800 ರಿಂದ ₹250ಕ್ಕೆ ಇಳಿಸಲಾಗುತ್ತದೆ ಮತ್ತು ಹವಾನಿಯಂತ್ರಿತ ಬಸ್ ಪಾಸ್ ₹1,000ಕ್ಕೆ ದೊರೆಯಲಿದೆ.
ಯಾಕೆ ಈ ರಿಯಾಯತಿ ಘೋಷಣೆ:
‘‘ಜನರು ತಮ್ಮ ಖಾಸಗಿ ವಾಹನಗಳನ್ನು ಮನೆಯಲ್ಲಿ ಬಿಟ್ಟು, ಸರ್ಕಾರಿ ಬಸ್ ಬಳಕೆ ಮಾಡುವುದರಿಂದ ಪರಿಸರ ಮಾಲಿನ್ಯ ಕಡಿಮೆ ಮಾಡಬಹುದಾಗಿದೆ. ಸಾರ್ವಜನಿಕ ಬಸ್ಗಳು ಖಾಲಿಯಾಗಿ ಓಡಾಡುತ್ತವೆ. ಕಡಿಮೆ ದರ ಮತ್ತು ಗ್ರಾಹಕರಿಗೆ ರಿಯಾಯತಿ ನೀಡುವ ಮೂಲಕ ಸಾರ್ವಜನಿಕರು ಬಸ್ ಸೇವೆ ಬಳಕೆ ಮಾಡುವಂತೆ ಉತ್ತೇಜಿಸುವುದು. ಯುವಕರು ತಮ್ಮ ಬೈಕ್'ಗಳನ್ನು ಬಿಟ್ಟು ಬಸ್ ಬಳಕೆ ಮಾಡುವುದರಿಂದ ಪರಿಸರ ಹಾನಿ ಕಡಿಮೆ ಮಾಡಬಹುದಾಗಿದೆ,’’ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.
