ಶ್ರೀನಗರ(ಆ.3): ಹುತಾತ್ಮ ಔರಂಗಜೇಬ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಸ್ಥರಾಗಿರುವ ಕಾಶ್ಮೀರಿ ಯುವಕರು, ತಮ್ಮ ತಮ್ಮ ಉದ್ಯೋಗ ತೊರೆದು ಭಾರತೀಯ ಸೇನೆಗೆ ಸೇರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗಲ್ಫ್ ರಾಷ್ಟ್ರಗಳಲ್ಲಿ ವಿವಿಧ ಉದ್ಯೋಗಳಲ್ಲಿರುವ ಔರಂಗಜೇಬ್ ನಿವಾಸವಿರುವ ಮಂದಾರ್ ಗ್ರಾಮದ ಸುಮಾರು 50 ಮಂದಿ ಯುವಕರು, ತಮ್ಮ ಉದ್ಯೋಗಗಳಿಗೆ ಶಾಶ್ವತವಾಗಿ ಗುಡ್ ಬೈ ಹೇಳುತ್ತಿದ್ದು. ಸ್ವಗ್ರಾಮಕ್ಕೆ ಮರಳಿ ಭಾರತೀಯ ಸೇನೆ ಸೇರಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಯೋಧ ಔರಂಗಜೇಬ್ ಆಪ್ತ ಸ್ನೇಹಿತರು ಎಂದು ಹೇಳಲಾಗುತ್ತಿರುವ ಮೊಹ್ಮದ್ ಕಿರಾಮತ್, ಮೊಹ್ಮದ್ ತಾಜ್ ಸೇರಿದಂತೆ ಸುಮಾರು 50 ಮಂದಿ ಯುವಕರು ಸೇನೆಗೆ ಸೇರುತ್ತಿದ್ದಾರೆ. ಔರಂಗಜೇಬ್ ಅಂತ್ಯಕ್ರಿಯೆಯಂದೇ ಇವರೆಲ್ಲಾ ಭಾರತಕ್ಕೆ ಮರಳುವ ಶಪಥ ಮಾಡಿದ್ದರು ಎನ್ನಲಾಗಿದೆ.

ಜೂನ್ 14ರಂದು ಔರಂಗಜೇಬ್ ಹತ್ಯೆ ವಿಚಾರ ತಿಳಿದ ಕೂಡಲೇ ಸ್ನೇಹಿತರು ಕಾಶ್ಮೀರಕ್ಕೆ ಮರಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಂತ್ಯಕ್ರಿಯೆ ಸಂದರ್ಭದಲ್ಲೇ ತಮ್ಮ ಸ್ನೇಹಿತ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಶಪಥ ಮಾಡಿದ್ದರಂತೆ. ಈ ಕುರಿತು ಮಾತನಾಡಿರುವ ಸ್ನೇಹಿತ ಕಿರಾಮತ್, ನಮ್ಮ ಸ್ನೇಹಿತ ಕೊಲೆಯಾದ ವಿಚಾರ ಕೇಳಿ ನಿಜಕ್ಕೂ ನಾವು ಆಘಾತಕ್ಕೊಳಗಾದೆವು. ಕೂಡಲೇ ಸ್ವಗ್ರಾಮಕ್ಕೆ ತೆರಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡೆವು. ಅಂದೇ ನಾವು ಭಾರತೀಯ ಸೇನೆ ಸೇರಲು ನಿರ್ಧರಿಸಿದೆವು ಎಂದು ತಿಳಿಸಿದ್ದಾರೆ.

ನಾವೆಲ್ಲಾ ಔರಂಗಜೇಬ್ ಅವರ ಹಾದಿಯನ್ನೇ ತುಳಿಯಲಿದ್ದು, ಧೈರ್ಯವಿದ್ದರೆ ಉಗ್ರರು ನಮ್ಮ ಬಳಿ ಬರಲು ಎಂದು ಕಿರಾಮತ್ ಚಾಲೆಂಜ್ ಹಾಕಿದ್ದಾರೆ. ಕಳೆದ ಜೂನ ೧೪ ರಂದು ಕರ್ತವ್ಯ ಮುಗಿಸಿ ಮನೆಗೆ ಬರುತ್ತಿದ್ದ ಔರಂಗಜೇಬ್ ಅವರನ್ನು ಉಗ್ರರು ಅಪಹರಿಸಿ ಕೊಂದು ಹಾಕಿದ್ದರು.