ಬೆಂಗಳೂರು [ಆ.17]:  ಸಾಕಷ್ಟು ಕುತೂಹಲ ಮೂಡಿಸಿರುವ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಮೊದಲ ಸಂಪುಟ ವಿಸ್ತರಣೆಗೆ ಶನಿವಾರ ಮುಹೂರ್ತ ನಿಗದಿಯಾಗುವ ಸಾಧ್ಯತೆಯಿದ್ದು, ಬಹುತೇಕ ಸೋಮವಾರ ವಿಸ್ತರಣೆ ನಡೆಯುವ ನಿರೀಕ್ಷೆಯಿದೆ. ಶನಿವಾರ ಸಂಜೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಸಚಿವ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡು ರಾಜ್ಯಕ್ಕೆ ಹಿಂತಿರುಗುವುದಾಗಿ ಖುದ್ದು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರೇ ಪ್ರಕಟಿಸಿದ್ದಾರೆ.

ಸದ್ಯ 12 ರಿಂದ 15 ಮಂದಿಗೆ ಮಾತ್ರವೇ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಲಾಗುತ್ತಿದೆ. 

ಅಮಿತ್ ಶಾ ಅವರೊಂದಿಗೆ ಶನಿವಾರ ಮಾತುಕತೆ ನಡೆಸುವ ಪೂರ್ವ ತಯಾರಿಯಾಗಿ ಯಡಿಯೂರಪ್ಪ ಅವರು ಶುಕ್ರವಾರ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯದವರೇ ಆಗಿರುವ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.

ಶುಕ್ರವಾರ ಮಧ್ಯಾಹ್ನ ನಂತರ ದೆಹಲಿಯಲ್ಲಿ ನಡೆದ ವಿದ್ಯಮಾನಗಳು ಸಚಿವ ಸಂಪುಟ ವಿಸ್ತರಣೆಯ ದೆಹಲಿ ಮಟ್ಟದ ಪ್ರಕ್ರಿಯೆಗಳಿಗೆ ಅಧಿಕೃತ ಚಾಲನೆ ನೀಡಿದೆ. ಬಿಜೆಪಿಯ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರ ಆರೋಗ್ಯ ಸ್ಥಿತಿ ವಿಷಮಿಸುತ್ತಿದೆ ಎಂಬ ಸುದ್ದಿಯ ನಡುವೆಯೇ ಸಂಪುಟ ವಿಸ್ತರಣೆಯ ಸಮಾಲೋಚನೆಯನ್ನು ಬಿಜೆಪಿ ನಾಯಕರು ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪಿಸಿದ್ದು, ಅವರು ವಿಸ್ತರಣೆಗೆ ಅನುಮತಿ ನೀಡಿದ್ದಾರೆ ಎಂದು ತಿಳಿದು
ಬಂದಿದೆ. 

ಸೋಮವಾರ ಸಚಿವ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಎಷ್ಟು ಮಂದಿ ಸಂಪುಟ ಸೇರಲಿದ್ದಾರೆ ಎಂಬುದು ಅಮಿತ್ ಶಾ ಅವರ ನಿರ್ಧಾರವನ್ನು ಆಧರಿಸಿದೆ. ಒಂದು ವೇಳೆ ಸಣ್ಣ ಸಂಪುಟವನ್ನು ರಚಿಸುವಂತೆ ಶಾ ಸೂಚಿಸಿದ್ದೇ ಆದರೆ ರಾಜ್ಯದ ಪ್ರಮುಖ ಸಮುದಾಯದ ಒಬ್ಬೊಬ್ಬರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಈ ಸೂತ್ರವನ್ನು ಮುಂದಿಟ್ಟರೆ ಜಗದೀಶ್ ಶೆಟ್ಟರ್, ಗೋವಿಂದ
ಕಾರಜೋಳ, ಆರ್.ಅಶೋಕ್, ಶ್ರೀರಾಮುಲು ಮುಂತಾದವರು ಮಾತ್ರವೇ ಸಂಪುಟ ಸೇರಬಹುದು ಎನ್ನಲಾಗಿದೆ.

*ಎಷ್ಟು ಮಂದಿ ಸಂಪುಟಕ್ಕೆ ಎಂಬುದು ಅಮಿತ್
ಶಾ ನಿರ್ಧಾರದ ಮೇಲೆ ಅವಲಂಬಿತ
*ಸಣ್ಣ ಸಂಪುಟ ರಚನೆ ಆದರೆ ರಾಜ್ಯದ ಪ್ರಮುಖ
ಸಮುದಾಯಗಳಿಗೆ ಪ್ರಾತಿನಿಧ್ಯ ಸಂಭವ
*ಶೆಟ್ಟರ್, ಕಾರಜೋಳ, ಅಶೋಕ್,
ರಾಮುಲುರಂತಹ ನಾಯಕರಿಗಷ್ಟೇ ಮಂತ್ರಿಗಿರಿ
* 12 ರಿಂದ 15 ಮಂದಿಗೆ ಸ್ಥಾನ ಸಿಗುವ
ನಿರೀಕ್ಷೆಯಲ್ಲಿ ರಾಜ್ಯ ಬಿಜೆಪಿ ನಾಯಕರು