Asianet Suvarna News Asianet Suvarna News

ಬಿಜೆಪಿಯಲ್ಲಿ ಮಕ್ಕಳ ಟಿಕೆಟ್‌ಗೆ ಪೈಪೋಟಿ

ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಂತೆ ಬಿಜೆಪಿಯಲ್ಲೂ ಹಲವು ಮುಖಂಡರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಕ್ಕಳಿಗೂ ಟಿಕೆಟ್‌ ಕೊಡಿಸಲು ಪ್ರಯತ್ನ ನಡೆಸಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪುತ್ರನಿಗೆ ಟಿಕೆಟ್‌ ಸಿಗುತ್ತಾ ಎಂದು ಕಾದು ಕುಳಿತಿದ್ದಾರೆ.

Ticket Compitation In Compitation

ವಿಜಯ್‌ ಮಲಗಿಹಾಳ

ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಂತೆ ಬಿಜೆಪಿಯಲ್ಲೂ ಹಲವು ಮುಖಂಡರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಕ್ಕಳಿಗೂ ಟಿಕೆಟ್‌ ಕೊಡಿಸಲು ಪ್ರಯತ್ನ ನಡೆಸಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪುತ್ರನಿಗೆ ಟಿಕೆಟ್‌ ಸಿಗುತ್ತಾ ಎಂದು ಕಾದು ಕುಳಿತಿದ್ದಾರೆ.

ಅಂದರೆ, ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್‌ ಸಿಕ್ಕಲ್ಲಿ ಹಾಲಿ ಶಾಸಕರು ಹಾಗೂ ಸಂಸದರಿಗೆ ತಮ್ಮ ಮಕ್ಕಳಿಗೂ ಟಿಕೆಟ್‌ ಕೇಳಲು ರಹದಾರಿ ಸಿಕ್ಕಂತಾಗುತ್ತದೆ ಎಂಬ ಅಭಿಪ್ರಾಯವನ್ನು ಈ ಮುಖಂಡರು ಹೊಂದಿದ್ದಾರೆ.

ಹೀಗಾಗಿ, ವಿಜಯೇಂದ್ರ ಅವರಿಗೆ ಟಿಕೆಟ್‌ ಲಭಿಸುವ ಬಗ್ಗೆ ಬಿಜೆಪಿ ಪಾಳೆಯದಲ್ಲೂ ದಿನೇ ದಿನೇ ಕುತೂಹಲ ಹೆಚ್ಚುತ್ತಿದೆ. ಒಂದು ವೇಳೆ ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡಿದಲ್ಲಿ ಪಕ್ಷದ ಮುಖಂಡರಿಗೂ ಆ ಬಗ್ಗೆ ಮನವರಿಕೆ ಮಾಡಿಕೊಡುವ ಸನ್ನಿವೇಶ ಉದ್ಭವಿಸಬಹುದು. ಇದಕ್ಕಾಗಿ ಆಂತರಿಕವಾಗಿ ಸಣ್ಣ ಮಟ್ಟದಲ್ಲಿ ಜಟಾಪಟಿಯೇ ನಡೆಯುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ತಿಳಿದು ಬಂದಿದೆ.

ಮಾಜಿ ಸಚಿವ ಹಾಗೂ ಹಾಲಿ ಶಾಸಕ ಉಮೇಶ್‌ ಕತ್ತಿ ಅವರು ತಮ್ಮ ಪುತ್ರ ನಿಖಿಲ್‌ ಅವರನ್ನು ಚುನಾವಣೆಯಲ್ಲಿ ಕಣಕ್ಕಿಳಿಸುವ ಇರಾದೆ ಹೊಂದಿದ್ದಾರೆ. ಪುತ್ರನನ್ನು ಹುಕ್ಕೇರಿಯಿಂದ ಕಣಕ್ಕಿಳಿಸಿ ತಾವು ಮತ್ತೊಂದು ಕ್ಷೇತ್ರಕ್ಕೆ ವಲಸೆ ಹೋಗುವ ಉದ್ದೇಶವಿದೆ. ಅದೇ ರೀತಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಗೋವಿಂದ ಕಾರಜೋಳ ಅವರಿಗೆ ತಮ್ಮ ಪುತ್ರ ಡಾ.ಗೋಪಾಲ್‌ ಅವರನ್ನು ವಿಜಯಪುರ ಜಿಲ್ಲೆ ನಾಗಠಾಣ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿಸುವ ಆಶಯವಿದೆ. ರಾಜ್ಯಸಭಾ ಸದಸ್ಯ ಪ್ರಭಾಕರ್‌ ಕೋರೆ ಅವರು ತಮ್ಮ ಪುತ್ರ ಅಮಿತ್‌ ಅವರನ್ನು ಚಿಕ್ಕೋಡಿಯಿಂದ ಸ್ಪರ್ಧಿಸಬೇಕು ಎಂಬ ಪ್ರಯತ್ನದಲ್ಲಿದ್ದಾರೆ. ಅದೇ ರೀತಿ ಮಾಜಿ ಸಚಿವ ಹಾಗೂ ವಿಧಾನಪರಿಷತ್ತಿನ ಹಾಲಿ ಸದಸ್ಯರಾಗಿರುವ ವಿ.ಸೋಮಣ್ಣ ಅವರು ತಮಗೆ ಮತ್ತು ತಮ್ಮ ಪುತ್ರನಿಗೆ ಟಿಕೆಟ್‌ ಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ.

ಇಲ್ಲಿ ಒಂದು ತಾಂತ್ರಿಕ ಅಂಶವಿದೆ. ಯಡಿಯೂರಪ್ಪ ಅವರ ಮತ್ತೊಬ್ಬ ಪುತ್ರ ಹಾಗೂ ಹಾಲಿ ಶಾಸಕ ಬಿ.ವೈ.ರಾಘವೇಂದ್ರ ಅವರು ಈಗ ತಂದೆಗಾಗಿ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಡುತ್ತಿದ್ದಾರೆ. ರಾಘವೇಂದ್ರ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ. ಹೀಗಾಗಿ, ಅವರ ಬದಲು ಮತ್ತೊಬ್ಬ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡಿದರೆ ತಪ್ಪೇನು ಎಂಬ ವಾದವನ್ನು ಯಡಿಯೂರಪ್ಪ ಬೆಂಬಲಿಗರು ಮುಂದಿಡಬಹುದು. ಇದೇ ವಾದವನ್ನು ಪಕ್ಷದ ವರಿಷ್ಠರೂ ಇತರ ಮುಖಂಡರ ಬಳಿ ಪ್ರಸ್ತಾಪಿಸಬಹುದು.

ಹಾಗಾದಲ್ಲಿ ಯಡಿಯೂರಪ್ಪ ಅವರು ವಿಧಾನಸಭಾ ಚುನಾವಣೆ ಗೆದ್ದು ಶಿವಮೊಗ್ಗ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಎದುರಾಗಬಹುದಾದ ಉಪಚುನಾವಣೆಯಲ್ಲಿ ರಾಘವೇಂದ್ರ ಅವರಿಗೆ ಟಿಕೆಟ್‌ ನೀಡಲು ಈಗಿನ ಬೆಳವಣಿಗೆಗಳು ಅಡ್ಡಿಯಾಗಬಹುದು. ಒಂದೇ ಕುಟುಂಬದ ಮೂವರಿಗೆ ಹೇಗೆ ಟಿಕೆಟ್‌ ನೀಡಲಾಗುತ್ತದೆ ಎಂಬ ಪ್ರಶ್ನೆ ಪಕ್ಷದ ಮುಖಂಡರಿಂದಲೇ ಕೇಳಿಬರಬಹುದು ಎಂಬ ಆತಂಕವೂ ಇದೆ.

ಇದೆಲ್ಲದರ ನಡುವೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್‌ ನೀಡಲು ವರಿಷ್ಠರು ಮುಂದಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ವರುಣಾ ಕ್ಷೇತ್ರ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಕ್ಷೇತ್ರ. ಮೇಲಾಗಿ ಈ ಬಾರಿ ಅವರ ಪುತ್ರ ಯತೀಂದ್ರ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಎದಿರೇಟು ನೀಡುವುದಕ್ಕಾಗಿ ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡಲಾಗುವುದು. ಇದಕ್ಕೆ ಯಾರೊಬ್ಬರೂ ಆಕ್ಷೇಪ ಮಾಡುವಂತಿಲ್ಲ ಎಂಬ ಸಂದೇಶವನ್ನು ಬಿಜೆಪಿ ವರಿಷ್ಠರು ನೀಡಬಹುದು ಎಂಬ ಮಾತೂ ಪಕ್ಷದಿಂದ ಕೇಳಿಬರುತ್ತಿದೆ.

Follow Us:
Download App:
  • android
  • ios