ನವದೆಹಲಿ[ಜೂ.25]: ಕರ್ನಾಟಕ, ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿರುವ ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಯ ಮೂರು ಹೊಸ ಫೋಟೋಗಳು ತನಗೆ ಲಭ್ಯವಾಗಿವೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ಹೇಳಿಕೊಂಡಿದೆ.

58 ವರ್ಷದ ಪಾತಕಿ ಕೆಂಪು ಬಣ್ಣದ ಕುರ್ತಾ ಧರಿಸಿ, ಸೆನೆಗಲ್‌ ದೇಶದ ರಾಜಧಾನಿ ಡಾಕರ್‌ನಲ್ಲಿ ತಾನು ಹೊಂದಿರುವ ಐಷಾರಾಮಿ ಹೋಟೆಲ್‌ನ ಆಯೋಜನೆಗೊಂಡಿದ್ದ ಪಾರ್ಟಿಯೊಂದರಲ್ಲಿ ಭಾಗವಹಿಸಲು ತೆರಳುತ್ತಿರುವ, 2019ರ ಜ.21ರಂದು ಕ್ಷೌರದ ಅಂಗಡಿಯಲ್ಲಿ ಬಂಧನಕ್ಕೆ ಒಳಗಾದ ಬಳಿಕ ಕಿತ್ತಳೆ ಬಣ್ಣದ ಟಿ- ಶರ್ಟ್‌, ಜೀನ್ಸ್‌ ಚಡ್ಡಿ ಧರಿಸಿ ಪೊಲೀಸ್‌ ಠಾಣೆಗೆ ತೆರಳುತ್ತಿರುವ ಹಾಗೂ ಬಂಧನಕ್ಕೆ ಒಳಗಾದಾಗ ಸೆರೆ ಹಿಡಿದ ಫೋಟೋಗಳು ತನ್ನ ಬಳಿ ಇವೆ ಎಂದು ರಿಪಬ್ಲಿಕ್‌ ಟೀವಿ ವರದಿ ಮಾಡಿದೆ.

ರವಿ ಪೂಜಾರಿ ಹೊಂದಿದ್ದ ನಕಲಿ ಪಾಸ್‌ಪೋರ್ಟ್‌ನ ಪ್ರತಿ ಕೂಡ ತನ್ನ ಬಳಿ ಇದೆ. 2013ರ ಜು.10ರಂದು ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೋ ಸರ್ಕಾರ ನೀಡಿದ್ದ ಪಾಸ್‌ಪೋರ್ಟ್‌ ಇದಾಗಿದೆ. ರವಿ ಪೂಜಾರಿಯ ಚಿತ್ರ ಇದರಲ್ಲಿದ್ದು, ‘ಆ್ಯಂಟೋನಿ ಫರ್ನಾಂಡಿಸ್‌’ ಹೆಸರಿನಲ್ಲಿ ಪಾಸ್‌ಪೋರ್ಟ್‌ ಇದೆ. 1961ರ ಜ.25ರ ಜನ್ಮದಿನಾಂಕ ಹೊಂದಿದ್ದು, ಮೈಸೂರಿನಲ್ಲಿ ಜನಿಸಿದ ವಿವರ ಇದೆ ಎಂದು ಚಾನಲ್‌ ತಿಳಿಸಿದೆ.