ಬೆಂಗಳೂರು(ಡಿ.19): ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸುವ ಸುದ್ದಿ ಇದೀಗ ಹೊರಬಿದ್ದಿದ್ದು, ರಾಜ್ಯದ ಮೂವರು ಸಚಿವರ ನೆತ್ತಿ ಮೇಲೆ ಸಿಬಿಐ ಕಣ್ಣು ಬಿದ್ದಿದೆ. ಈ ಸಚಿವರುಗಳ ಹಣಕಾಸು ವ್ಯವಹಾರದ ಮೇಲೆ ಇಡಿ ತೂಗುಗತ್ತಿ ತೂಗಾಡುತ್ತಿದ್ದು, ಸಚಿವರ ಹಣಕಾಸು ವ್ಯವಹಾರದ ಬಗ್ಗೆ ಸಿಬಿಐ, ಇಡಿಗೆ ಮಹತ್ವದ ದಾಖಲೆ ಲಭ್ಯವಾಗಿದೆ.

ಸದ್ಯ ತಿಳಿದು ಬಂದ ಮಾಹಿತಿ ಅನ್ವಯ ಸಚಿವ ಜಾರ್ಜ್, ಎಸ್. ಸಿ. ಮಹಾದೇವಪ್ಪ ಮತ್ತು ಎಂ. ಬಿ ಪಾಟೀಲ್'ಗೆ ಸಂಕಷ್ಟ ಎದುರಾಗಿದೆ. ಇವರ ವಿರುದ್ಧ ಭ್ರಷ್ಟಾಚಾರ, ಕಿಕ್'ಬ್ಯಾಕ್ ಪ್ರಕರಣಗಳಲ್ಲಿ ಭಾಗಿಯಾಗಿರುವ ದಾಖಲೆಗಳು ಲಭ್ಯವಾಗಿದೆ ಎಂದು ತಿಳಿದು ಬಂದಿದೆ.

ರಾಜಕೀಯ ವಲಯದಲ್ಲೂ ಈ ವಿಚಾರದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. CBI ಬಲೆಗೆ ಬಿದ್ದ ಸಚಿವರ ಆಪ್ತ ಅಧಿಕಾರಿಗಳು ಸ್ಫೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ತನಿಖೆ ವೇಳೆ ಸಚಿವರ ವ್ಯವಹಾರದ ಕುರಿತಾಗಿ ಮಾಹಿತಿ ನೀಡಿದ್ದಾರೆಂಬುವುದು ಸದ್ಯಕ್ಕೆ ಸಿಕ್ಕ ಮಾಹಿತಿ. ಇಷ್ಟೇ ಅಲ್ಲದೆ ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆಯಲ್ಲೂ ಈ ಪ್ರಭಾವಿ ಸಚಿವರು ಭಾಗಿಯಾಗಿದ್ದರು ಎಂಬ ಮಾಹಿತಿಯನ್ನೂ ಈ ವೇಳೆ ಬಾಯ್ಬಿಟ್ಟಿದ್ದಾರೆ.  

ಈ ಮೊದಲೇ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ಕುರಿತಾಗಿ ಭವಿಷ್ಯ ನುಡಿದಿದ್ದರು. ಈಗಿನ ರಾಜಕೀಯ ಬೆಳವಣಿಗೆಗಳನ್ನು ಕಂಡರೆ ಈ ಭವಿಷ್ಯ ನಿಜವಾಗುತ್ತದೆ ಎಂಬ ಅನುಮಾನ ಮೂಡುತ್ತದೆ.