ನವದೆಹಲಿ(ಅ.7): ಕಾಲ್ ಸೆಂಟರ್ ಒಂದರ ಅಸಮಧಾನಿತ ಸಿಬ್ಬಂದಿ ದೇಶದಲ್ಲಿ ನಡೆದಿರುವ ದೊಡ್ಡ ನಕಲಿ ಕಾಲ್ ಸೆಂಟರ್ ಜಾಲವನ್ನು ಬಹಿರಂಗಪಡಿಸಲು ಪೊಲೀಸರಿಗೆ ನೆರವಾಗಿದ್ದಾರೆ. ಅವರು ನೀಡಿದ ಮಾಹಿತಿ ಮೇರೆಗೆ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅದರ ಮೂಲಕ ಒಂದು ವರ್ಷದಲ್ಲಿ ನೂರಾರು ಮಂದಿ ಅಮೆರಿಕದ ನಾಗರಿಕರಿಗೆ 500 ಕೋಟಿ ವೌಲ್ಯದಷ್ಟು ವಂಚಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ಸಂಬಂಸಿದಂತೆ ಇದುವರೆಗೆ 70 ಮಂದಿಯನ್ನು ಬಂಸಲಾಗಿದೆ.
ಈ ಪ್ರಕರಣದ ಮಾಹಿತಿಯನ್ನು ಅಮೆರಿಕದ ತನಿಖಾ ಸಂಸ್ಥೆಗಳೂ ಬಯಸಿದ್ದಾರೆ ಎಂದು ಠಾಣೆ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಹೇಳಿದ್ದಾರೆ. ತನಿಖೆ ಮುಂದುವರಿಯುತ್ತಿರುವುದರಿಂದ ಇನ್ನೂ ಹೆಚ್ಚಿನ ವಂಚನೆ ಪ್ರಕರಣಗಳು ಪತ್ತೆಯಾಗಬಹುದು ಎಂದು ಅವರು ಹೇಳಿದ್ದಾರೆ. ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದವರನ್ನೂ ವಂಚಿಸಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ನಕಲಿ ಕಾಲ್ ಸೆಂಟರ್‌ಗಳ ಸುಮಾರು 630 ನೌಕರರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಈ ನಕಲಿ ಕಾಲ್ ಸೆಂಟರ್‌ಗಳ ಮೂಲಕ ಅಮೆರಿಕದ ಪ್ರಜೆಗಳನ್ನು ಸಂಪರ್ಕಿಸಿ ಅಮೆರಿಕದ ಆಂತರಿಕ ಕಂದಾಯ ಇಲಾಖೆಯವರೆಂದು ಪರಿಚಯಿಸಿಕೊಳ್ಳಲಾಗುತಿತ್ತು. ತೆರಿಗೆ ವಂಚನೆಗಾಗಿ ಜೈಲು ಸೇರುವ ಭೀತಿಯನ್ನು ಅವರಲ್ಲಿ ಹುಟ್ಟಿಸಿ, ಜೈಲು ಪಾಲಾಗುವುದನ್ನು ತಪ್ಪಿಸಲು ಸಾಮಾನ್ಯವಾಗಿ 33,000ದಿಂದ 3.33 ಲಕ್ಷ ದಷ್ಟು ದಂಡವನ್ನು ಆನ್‌ಲೈನ್ ಮೂಲಕ ಪಾವತಿಸಲು ಸೂಚಿಸಲಾಗುತಿತ್ತು.
ಜಾಲದ ಅಮೆರಿಕದ ಸದಸ್ಯರು ಅಲ್ಲಿನ ನಾಗರಿಕರ ಮಾಹಿತಿ ಸಂಗ್ರಹಿಸಿ ಇಲ್ಲಿನವರಿಗೆ ಒದಗಿಸುತ್ತಿದ್ದರು. ಠಾಣೆಯ ಮೀರಾ ರಸ್ತೆಯಲ್ಲಿರುವ ಏಳು ಮಹಡಿಗಳ ಕಟ್ಟಡವೊಂದರಲ್ಲಿ ಕಾರ್ಯಾಚರಿಸುತ್ತಿದ್ದ ಮೂರು ನಕಲಿ ಕಾಲ್ ಸೆಂಟರ್‌ಗಳು ಈ ಕುಕೃತ್ಯದಲ್ಲಿ ತೊಡಗಿದ್ದವು. ಮಂಗಳವಾರ ತಡರಾತ್ರಿ ದಾಳಿ ನಡೆಸಿರುವ ಪೊಲೀಸರು ಈ ಅಕ್ರಮವನ್ನು ಬಯಲಿಗೆಳೆದಿದ್ದಾರೆ. 852 ಹಾರ್ಡ್ ಡಿಸ್ಕ್‌ಗಳು, ಹೈ ಎಂಡ್ ಸರ್ವರ್‌ಗಳು, ಡಿವಿಆರ್‌ಗಳು, ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
