ಮಂಡ್ಯ: ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಗಾಯಾಳುಗಳನ್ನು ರಕ್ಷಿಸಲು ಹೋದ ಮೂವರು ವಿದ್ಯುತ್‌ ತಂತಿ ತಗುಲಿ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಣಿಗೆರೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗ್ರಾಮದ ಪುಟ್ಟ, ಪ್ರಸನ್ನ, ದೇವರಾಜು ಮೃತಪಟ್ಟದುರ್ದೈವಿಗಳು. ಮಳವಳ್ಳಿಯಿಂದ ಕೆಎಂ ದೊಡ್ಡಿ ಕಡೆಗೆ ಚಲಿಸುತ್ತಿದ್ದ ಸ್ವಿಫ್ಟ್‌ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಕಾರು ಅಪಘಾತವಾಗಿರುವುದನ್ನು ಗಮನಿಸಿದ ಗ್ರಾಮಸ್ಥರು ಆ ಸಂದರ್ಭ ಗಾಯಾಳುಗಳ ರಕ್ಷಣೆಗೆ ಮುಂದಾಗಿದ್ದಾರೆ.

ಈ ವೇಳೆ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿಯನ್ನು ಗಮನಿಸದೆ ಕಾರ್ಯಾಚರಣೆಗೆ ಮುಂದಾಗಿರುವುದು ದುರ್ಘಟನೆಗೆ ಕಾರಣವೆನ್ನಲಾಗಿದೆ. ರಕ್ಷಿಸಲು ಹೋದ ಗ್ರಾಮಸ್ಥರಲ್ಲಿ 8ಕ್ಕೂ ಹೆಚ್ಚು ಮಂದಿ ಕೂದಲೆಳೆಯಿಂದ ಪಾರಾಗಿದ್ದಾರೆ. ಕೆ.ಎಂ.ದೊಡ್ಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.