ಅಕ್ರಮವಾಗಿ ಮೂವತ್ತಕ್ಕೂ ಹೆಚ್ಚು ನಾಡ ಬಾಂಬ್‌ಗಳನ್ನು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಹೆಬ್ರಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕಾರ್ಕಳ: ಅಕ್ರಮವಾಗಿ ಮೂವತ್ತಕ್ಕೂ ಹೆಚ್ಚು ನಾಡ ಬಾಂಬ್ಗಳನ್ನು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಹೆಬ್ರಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕನ್ಯಾನ ನಿವಾಸಿ ನಾಗೇಶ ನಾಯ್ಕ(37), ಅಲ್ಬಾಡಿಯ ಗುಣಕರ ಶೆಟ್ಟಿ (56) ಹಾಗೂ ಲಕ್ಷ್ಮಣ ಶೆಟ್ಟಿ (67) ಬಂಧಿತರು. ಆರೋಪಿಗಳಲ್ಲೊಬ್ಬನಾದ ನಾಗೇಶ್ ನಾಯಕ್ ಮಂಗಳವಾರ ಸಂಜೆ ಶಿವಪುರದ ಬ್ಯಾಣ ಮುಖ್ಯ ರಸ್ತೆಯಲ್ಲಿ ಸ್ಕೂಟರ್ನಲ್ಲಿ ನಾಡ ಬಾಂಬ್ ಗಳನ್ನು ಸಾಗಿಸುತ್ತಿದ್ದ. ಈ ವೇಳೆ ಗಸ್ತು ಕರ್ತವ್ಯದಲ್ಲಿ ಹೆಬ್ರಿ ಪೊಲೀಸರು ತಪಾಸಣೆ ನಡೆಸಿ ಆತನನ್ನು ಬಂಧಿಸಿ 30 ನಾಡ ಬಾಂಬ್, 1 ಚೂರಿ ಹಾಗೂ ತಲೆಗೆ ಕಟ್ಟುವ ಚಾರ್ಜ್ ಅನ್ನು ವಶಕ್ಕೆ ಪಡೆದಿದ್ದರು.
ಆತನನ್ನು ವಿಚಾರಣೆ ನಡೆಸಿದಾಗ ಈ ನಾಡ ಬಾಂಬ್ಗಳನ್ನು ಕಾಡುಪ್ರಾಣಿ ಗಳನ್ನು ಬೇಟೆಯಾಡಲು ಬಳಸುತ್ತಿದ್ದು, ಅಲ್ಬಾಡಿ ಗ್ರಾಮದ ಆರ್ಡಿ ಎಂಬಲ್ಲಿನ ಗುಣಕರ ಶೆಟ್ಟಿ ಎಂಬಾತನಿಂದ ತಲಾ ₹500ರಂತೆ ₹15 ಸಾವಿರ ಕೊಟ್ಟು ಖರೀದಿಸಿದ್ದಾಗಿ ಮಾಹಿತಿ ನೀಡಿದ್ದ. ಈ ಮಾಹಿತಿ ಮೇರೆಗೆ ಹೆಬ್ರಿ ಪೊಲೀಸರು ಅಲ್ಬಾಡಿಯ ಗುಣಕರ ಶೆಟ್ಟಿ ಮನೆಯ ಮೇಲೆ ದಾಳಿ ನಡೆಸಿ ಇನ್ನೂ 3 ನಾಡ ಬಾಂಬ್ಗಳನ್ನು ವಶಕ್ಕೆ ಪಡೆದಿದ್ದಾರೆ.
