ಪತಿ ಜೈಲಿಗೆ ಕಳಿಸಲು ವಿಧಾನಸೌಧಕ್ಕೆ ಪತ್ನಿ 'ಬಾಂಬ್'

First Published 1, Mar 2018, 8:36 AM IST
Threat Call Inside Story Revealed
Highlights

ಪೂರ್ವನಿಯೋಜಿತದಂತೆ ಸ್ನೇಹಿತ ಶರತ್ ಎಂಬಾತನ ಹೊಸ್ ಸಿಮ್‌'ನಿಂದ ಶ್ರೀಧರ್, ‘ನನ್ನ ಹೆಸರು ಪ್ರಕಾಶ್ ರಾಥೋಡ್ ಪಾಟೀಲ್. ನಿಮ್ಮ ಠಾಣಾ ಸರಹದ್ದಿನ ವಡೇರಹಳ್ಳಿಯಲ್ಲಿ ನೆಲೆಸಿರುವ ಮಧು ನಕ್ಸಲ್ ಗುಂಪಿಗೆ ಸೇರಿದವಳು. ಆಕೆಯ ಸಹಚರರು ಈ ದಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಜ.26 ರಂದು ವಿಧಾನಸೌಧದಲ್ಲಿ ಬಾಂಬ್ ಇಡಲು ಸಂಚು ರೂಪಿಸಿದ್ದಾರೆ’ ಎಂದು ಹೇಳಿದ್ದ. ಅಲ್ಲದೆ ಅನುಮಾನ ಬರಬಾರದು ಎಂದು ಮಧು ಹೆಸರು ಜತೆಗೆ ವೀಣಾ ಕೂಡ ಇದರಲ್ಲಿ ಶಾಮೀಲಾಗಿದ್ದಾಳೆ ಎಂದಿದ್ದ.

ಬೆಂಗಳೂರು(ಮಾ.01): ಪ್ರೀತಿಗೆ ಅಡ್ಡಿಯಾಗಿದ್ದ ಪತಿಯನ್ನು ಜೈಲಿಗೆ ಕಳುಹಿಸಲು ವಿಧಾನಸೌಧ ಸ್ಫೋಟಿಸುವುದಾಗಿ ಹುಸಿ ಬೆದರಿಕೆ ಕರೆ ಸಂಚು ರೂಪಿಸಿದ್ದ ಮಹಿಳೆಯೊಬ್ಬರು, ಈಗ ತಮ್ಮ ಪ್ರಿಯಕರನ ಜತೆ ತಾವೇ ತೋಡಿದ್ದ ಖೆಡ್ಡಾಕ್ಕೆ ಬಿದ್ದಿದ್ದಾರೆ. ವಡೇರಹಳ್ಳಿ ನಿವಾಸಿ ವೀಣಾ ಹಾಗೂ ಆಕೆಯ ಪ್ರಿಯಕರ ಜಿ.ಶ್ರೀಧರ್ ಬಂಧಿತರು.

ಇತ್ತೀಚೆಗೆ ವಿದ್ಯಾರಣ್ಯಪುರ ಠಾಣೆಗೆ ಪ್ರಕಾಶ್ ಹೆಸರಿನಲ್ಲಿ ಕರೆ ಮಾಡಿದ ಆರೋಪಿ ಶ್ರೀಧರ್, ನಕ್ಸಲರು ವಿಧಾನಸೌಧ ಸ್ಫೋಟಿಸಲಿದ್ದಾರೆ ಎಂದು ಬೆದರಿಕೆ ಕರೆ ಮಾಡಿದ್ದರು. ಈ ಕರೆ ಮೂಲ ಪತ್ತೆ ಹಚ್ಚಿದಾಗ ಪ್ರೇಮ ಕಹಾನಿ ಬೆಳಕಿಗೆ ಬಂದಿತು ಎಂದು ಪೊಲೀಸರು ಹೇಳಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಪ್ರಕಾಶ್ ರಾಥೋಡ್ ಮೊದಲು ಮಧು ಎಂಬುವರ ಜತೆ ವಿವಾಹವಾಗಿದ್ದರು. ಹತ್ತು ವರ್ಷಗಳ ಬಳಿಕ ವೀಣಾ ಜತೆ ಎರಡನೇ ಮದುವೆಯಾದರು. ಆದರೆ ಆಸ್ತಿ ವಿಚಾರಕ್ಕೆ ಪ್ರಕಾಶ್ ಕುಟುಂಬದಲ್ಲಿ ಕಲಹ ಶುರುವಾಯಿತು. ಪತಿಯ ಆಸ್ತಿ ಹಂಚಿಕೆ ವಿಚಾರಕ್ಕೆ ಮಧು ಹಾಗೂ ವೀಣಾ ನಡುವೆ ಭಿನ್ನಾಭಿಪ್ರಾಯ ವಿಕೋಪಕ್ಕೆ ತಿರುಗಿ, 2012ರಲ್ಲಿ ಅವರ ಗಲಾಟೆಗಳು ನಡೆದಿದ್ದವು. ಈ ವಿವಾದ ಸಂಬಂಧ ಪರಸ್ಪರರ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು-ಪ್ರತಿ ದೂರು ಸಹ ದಾಖಲಾಗಿತ್ತು. ಈ ನಡುವೆ ವಂಚನೆ ಪ್ರಕರಣ ಸಂಬಂಧ ಪ್ರಕಾಶ್ ಅವರನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಆ ನಂತರ ಪೇಯಿಂಗ್ ಗೆಸ್ಟ್ ವ್ಯವಹಾರ ಪ್ರಾರಂಭಿಸಿದ ವೀಣಾ, ತನ್ನ ಕಟ್ಟಡದಲ್ಲೇ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಶ್ರೀಧರ್‌'ನನ್ನು ಪ್ರೀತಿಸಲು ಶುರು ಮಾಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ಫೆ.24 ರಂದು ಜೈಲಿನಿಂದ ಬಿಡುಗಡೆಯಾದ ಪ್ರಕಾಶ್, ವೀಣಾಳ ಮನೆಗೆ ತೆರಳಿದ್ದರು. ಇದರಿಂದ ಕುಪಿತಗೊಂಡ ಶ್ರೀಧರ್, ನನ್ನನ್ನು ಪ್ರೀತಿಸುವುದಾದರೆ ಗಂಡನಿಂದ ಪ್ರತ್ಯೇಕವಾಗಬೇಕು ಎಂದಿದ್ದ. ಈ ಮಾತಿಗೆ ಒಪ್ಪಿದ ಆಕೆ, ಪತಿಯನ್ನು ಹೇಗಾದರೂ ಮಾಡಿ ಮತ್ತೆ ಜೈಲಿಗೆ ಕಳುಹಿಸಬೇಕು. ಹಾಗೆಯೇ ನನಗೆ ಮೋಸ ಮಾಡಿರುವ ಅವರ ಎರಡನೇ ಪತ್ನಿ ಮಧು ಸಹ ಕಾರಾಗೃಹ ಸೇರಬೇಕು. ಇದಕ್ಕೆ ಸೂಕ್ತ ಸಂಚು ರೂಪಿಸು ಎಂದಿದ್ದಳು. ಆಗ ರೂಪುಗೊಂಡಿದ್ದೇ ಹುಸಿ ಬಾಂಬ್ ಬೆದರಿಕೆ ಯೋಜನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾನು ನಕ್ಸಲ್ ಎಂದ್ರು: ಪೂರ್ವನಿಯೋಜಿತದಂತೆ ಸ್ನೇಹಿತ ಶರತ್ ಎಂಬಾತನ ಹೊಸ್ ಸಿಮ್‌'ನಿಂದ ಶ್ರೀಧರ್, ‘ನನ್ನ ಹೆಸರು ಪ್ರಕಾಶ್ ರಾಥೋಡ್ ಪಾಟೀಲ್. ನಿಮ್ಮ ಠಾಣಾ ಸರಹದ್ದಿನ ವಡೇರಹಳ್ಳಿಯಲ್ಲಿ ನೆಲೆಸಿರುವ ಮಧು ನಕ್ಸಲ್ ಗುಂಪಿಗೆ ಸೇರಿದವಳು. ಆಕೆಯ ಸಹಚರರು ಈ ದಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಜ.26 ರಂದು ವಿಧಾನಸೌಧದಲ್ಲಿ ಬಾಂಬ್ ಇಡಲು ಸಂಚು ರೂಪಿಸಿದ್ದಾರೆ’ ಎಂದು ಹೇಳಿದ್ದ. ಅಲ್ಲದೆ ಅನುಮಾನ ಬರಬಾರದು ಎಂದು ಮಧು ಹೆಸರು ಜತೆಗೆ ವೀಣಾ ಕೂಡ ಇದರಲ್ಲಿ ಶಾಮೀಲಾಗಿದ್ದಾಳೆ ಎಂದಿದ್ದ.

ಈ ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕೂಡಲೇ ವಡೇರಹಳ್ಳಿಗೆ ತೆರಳಿ ವೀಣಾ ಅವರನ್ನು ವಿಚಾರಣೆ ನಡೆಸಿದ್ದರು. ಆಗ ಪ್ರಕಾಶ್ ರಾಥೋಡ್ ನನ್ನ ಗಂಡ ಎಂದು ಹೇಳಿದ್ದರು. ಆನಂತರ ಮಧು ಅವರನ್ನು ವಿಚಾರಣೆಗೊಳಪಡಿಸಿದಾಗ ನಾನು ಯಾವ ನಕ್ಸಲ್ ಗುಂಪಿಗೂ ಸೇರಿದವಳಲ್ಲ. ಪ್ರಕಾಶ್ ರಾಥೋಡ್ ನನ್ನ ಪತಿ ಎಂದಿದ್ದರು. ಕೊನೆಗೆ ಪ್ರಕಾಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಾಗ ಮಧು ಮತ್ತು ವೀಣಾ ಇಬ್ಬರು ನನ್ನ ಹೆಂಡತಿಯರೇ ಎಂದು ಸ್ಪಷ್ಟಪಡಿಸಿದ್ದಾರೆ. ಆರು ತಿಂಗಳಿಂದ ಜೈಲಿನಲ್ಲಿದ್ದ ನಾನು, ಜ.24 ರಂದು ಸಂಜೆಯಷ್ಟೆ ಜಾಮೀನಿನ ಮೇಲೆ ಬಿಡುಗಡೆಯಾದೆ. ಈ ವಿಚಾರ ತಿಳಿದು ಪರಿಚಿತರೇ ನನ್ನ ಹೆಸರಿನಲ್ಲಿ ಠಾಣೆಗೆ ಕರೆ

ಮಾಡಿರಬಹುದು ಎಂದು ಹೇಳಿಕೆ ಕೊಟ್ಟಿದ್ದರು ಎನ್ನಲಾಗಿದೆ. ಬಳಿಕ ಬೆದರಿಕೆ ಕರೆ ದನಿ ಸಹ ಪ್ರಕಾಶ್ ದನಿಗೆ ಹೊಂದಾಣಿಕೆಯಾಗಲಿಲ್ಲ. ಹೀಗಾಗಿ ಹುಸಿ ಬೆದರಿಕೆ

ಕರೆ ಮಾಡಿದವರ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಆ ಬೆದರಿಕೆ ಕರೆ ಮೂಲ ಕೆದಕಿದಾಗ ವೀಣಾ ಮೇಲೆ ಅನುಮಾನ ಬಂದಿದೆ. ಈ ಶಂಕೆ ಹಿನ್ನೆಲೆಯಲ್ಲಿ ಆಕೆಯನ್ನು ಕರೆದು ವಿಚಾರಿಸಿದಾಗ ಮೊದಲು ಒಪ್ಪಲಿಲ್ಲ. ಬಳಿಕ ಆಕೆಯ ಮೊಬೈಲ್ ಕರೆ ವಿವರ ಪರಿಶೀಲಿಸಿದಾಗ ಜ.24 ರಂದು ಶ್ರೀಧರ್‌'ಗೆ ಹೆಚ್ಚು ಕರೆಗಳು ಹೋಗಿದ್ದ ಸಂಗತಿ ಗೊತ್ತಾಯಿತು. ಕೂಡಲೇ ಆತನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಸತ್ಯ ಬಯಲಾಯಿತು ಎಂದು ವಿದ್ಯಾರಣ್ಯಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

loader