ಬೆಂಗಳೂರು (ಸೆ. 08): ಕೇರಳ ಮತ್ತು ಕರ್ನಾಟಕದ ಕೊಡಗಿನಲ್ಲಿ ಉಂಟಾದ ಪ್ರವಾಹವು ಇಡೀ ದೇಶದ ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಭೇಟಿ ನೀಡಿ 600 ಕೋಟಿ ತುರ್ತು ಪರಿಹಾರ
ನೀಡಿದ್ದಾರೆ.

ಆದರೆ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ, ಮೇಘಾಲಯಗಳಲ್ಲಿ ಪ್ರತಿ ವರ್ಷವೂ ಪ್ರವಾಹ ಸ್ಥಿತಿ ಉಂಟಾಗುತ್ತದೆ. ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಸಾವಿರಾರು ಜನರು ಮನೆ-ಮಠ ಕಳೆದುಕೊಳ್ಳುತ್ತಾರೆ. ಲಕ್ಷಾಂತರ ಎಕರೆ ಕೃಷಿ ಭೂಮಿ ನಾಶವಾಗುತ್ತದೆ. ಆದರೆ ಇದ್ಯಾವುದೂ ಅಷ್ಟೇನೂ ಸುದ್ದಿಯಾಗುವುದಿಲ್ಲ.

ಈ ವರ್ಷ ಪ್ರವಾಹಕ್ಕೆ ತುತ್ತಾಗಿ ಸುದ್ದಿಯಾಗದ ಈಶಾನ್ಯ ರಾಜ್ಯಗಳೂ ಬಹುತೇಕ ಕೇರಳದಂತೆಯೇ ಆಗಿವೆ. ಅದರ ವಿವರ ಇಲ್ಲಿದೆ.  

ಅಸ್ಸಾಂ 

ಅಸ್ಸಾಂನಲ್ಲಿ ಪ್ರತಿ ವರ್ಷವೂ ಪ್ರವಾಹಕ್ಕೆ ಸಿಲುಕಿ ನೂರಾರು ಜನರು ಬಲಿಯಾಗುತ್ತಾರೆ. ಆದರೆ ಅದು ದೇಶದ ಗಮನ ಸೆಳೆಯುವುದು ಅಪರೂಪ. ಪ್ರತಿ ವರ್ಷ ಅಸ್ಸಾಂನಲ್ಲಿ ಪ್ರವಾಹದಿಂದಾಗಿ ಕನಿಷ್ಠ 200 ಕೋಟಿ ನಷ್ಟ ಉಂಟಾಗುತ್ತದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚು ನಷ್ಟವುಂಟಾಗಿದೆ. ಈ ಬಾರಿಯ ಪ್ರವಾಹಕ್ಕೆ ಸಿಲುಕಿ ೫೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 8 ಲಕ್ಷಕ್ಕೂ ಅಧಿಕ ಮಂದಿಯ ಬದುಕು ಅತಂತ್ರವಾಗಿದೆ. ಸುಮಾರು 2 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಭೂಕುಸಿತಕ್ಕೆ ಆಹುತಿಯಾಗಿ ಕೃಷಿಕರಿಗೆ ದೊಡ್ಡಮಟ್ಟದಲ್ಲಿ ನಷ್ಟವುಂಟಾಗಿದೆ.

ಆಗಸ್ಟ್ 2 ನೇ ವಾರದಲ್ಲಿ ರಾಜ್ಯದಲ್ಲಿ ಶೇ.೩೦ರಷ್ಟು ಮಳೆಯಾಗಿದೆ. ರಾಜ್ಯದ 3 ಜಿಲ್ಲೆಗಳಾದ ಧೆಮಾಜಿ, ಗೋಲ್‌ಘಾಟ್ ಮತ್ತು ದಿಬ್ರುಘರ್‌ನಲ್ಲಿ ಅತಿ ಹೆಚ್ಚು ಪ್ರವಾಹ ಸ್ಥಿತಿ ಉಂಟಾಗಿದ್ದು, ಸುಮಾರು ೧೦,೦೦೦ ಜನರು ಪ್ರವಾಹದಲ್ಲಿ ಸಿಲುಕಿದ್ದರು. ರಾಷ್ಟ್ರೀಯ ಪ್ರವಾಹ ಸಮಿತಿ ವರದಿ ಪ್ರಕಾರ ರಾಜ್ಯದ 80 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಕನಿಷ್ಠ 31 ಲಕ್ಷ ಹೆಕ್ಟೇರ್ ಭೂಮಿ ಪ್ರವಾಹಪೀಡಿತ ಪ್ರದೇಶ.

ವರ್ಷ ನಿರಾಶ್ರಿತ ಕೇಂದ್ರಗಳು:

ಶಾಲೆಗಳೇ ಪ್ರತಿ ವರ್ಷ ಅಸ್ಸಾಂನ ಶಾಲೆಗಳೇ ನಿರಾಶ್ರಿತರ ಕೇಂದ್ರಗಳಾಗಿ ಮಾರ್ಪಡುತ್ತವೆ. ಕಳೆದ ವರ್ಷ 2,800 ಶಾಲೆಗಳು ಪ್ರವಾಹಕ್ಕೆ ಸಿಲುಕಿದ ಜನರ ಆಶ್ರಯ ಕೇಂದ್ರಗಳಾಗಿ ಮಾರ್ಪಟ್ಟಿದ್ದವು. ಈ ವರ್ಷ ಜೂನ್ ಮತ್ತು ಆಗಸ್ಟ್ ತಿಂಗಳಿನಲ್ಲಿ 1,000 ಶಾಲೆಗಳಲ್ಲಿ ನಿರಾಶ್ರಿತರಿಗಾಗಿ ಮೀಸಲಿಡಲಾಗಿತ್ತು. ಗೋಲ್‌ಘಾಟ್‌ನಲ್ಲಿ ಈಗಲೂ ಪ್ರವಾಹ ಸ್ಥಿತಿ ಇದ್ದು, ಅಲ್ಲಿನ 40 ಶಾಲೆಗಳಲ್ಲಿ ಜನರಿಗೆ ಆಶ್ರಯ ನೀಡಲಾಗಿದೆ.

ಕಳೆದ ವರ್ಷ 160 ಜನ ಸಾವು:

2017 ರಲ್ಲಿ ಅಸ್ಸಾಂನಲ್ಲಿ ಕನಿಷ್ಠ 160 ಜನರು ಮೃತಪಟ್ಟಿದ್ದರು, 30 ಲಕ್ಷಕ್ಕೂ ಅಧಿಕ ಜನರು ಪ್ರವಾಹದಲ್ಲಿ ಸಿಲುಕಿದ್ದರು. ಕನಿಷ್ಠ 10 ಸಾವಿರ ಕೋಟಿ ನಷ್ಟ ಉಂಟಾಗಿತ್ತು. ಯುನೆಸ್ಕೋದಿಂದ ವಿಶ್ವಪಾರಂಪರಿಕ ತಾಣ ಎಂಬ ಮಾನ್ಯತೆ ಪಡೆದ ಜಿಲ್ಲೆಯ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸುಮಾರು 400 ಕ್ಕೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿದ್ದವು. ಉದ್ಯಾನವನದ ಶೇ.90 ರಷ್ಟು ಭಾಗ ನೀರಿನಲ್ಲಿ ಮುಳುಗಿತ್ತು.

1950 ರಿಂದಲೂ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹದ್ದೇ ಸಮಸ್ಯೆ. ಇದರಿಂದಾಗಿಯೇ ಈಶಾನ್ಯ ರಾಜ್ಯಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಹೀಗಾಗಿ ಆ ರಾಜ್ಯಗಳ ಜನರು ದೇಶದ ಮತ್ತಿತರ ಭಾಗಗಳಿಗೆ ವಲಸೆ ಹೋಗುತ್ತಾರೆ. ಅಸ್ಸಾಂನ 60,000 ವಲಸಿಗರು ಕೇರಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಅರ್ಧದಷ್ಟು ಜನರು ಪ್ರವಾಹ ಉಂಟಾಗುವ ಸ್ಥಳದಿಂದ ವಲಸೆ ಹೋದವರು.

ಮಣಿಪುರ 

ಮಣಿಪುರದ 5 ಜಿಲ್ಲೆಗಳು, 4 ಬ್ಲಾಕ್‌ಗಳು ಹಾಗೂ ಸುಮಾರು 2018 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 1.8 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದರು ಎಂದು ಅಂದಾಜಿಸಲಾಗಿದೆ. ಜೂನ್ ವೇಳೆಗಾಗಲೇ ಪ್ರವಾಹಕ್ಕೆ ಸಿಲುಕಿ 7 ಜನರು ಸಾವನ್ನಪ್ಪಿದ್ದರು. ವಿಪತ್ತು ನಿರ್ವಹಣೆ ಇಲಾಖೆಯ ಮಾಹಿತಿ ಪ್ರಕಾರ ಥೋಬಾಲ್ ಮತ್ತು ಇಂಫಾಲ್ ಜಿಲ್ಲೆಗಳಲ್ಲಿ ಪ್ರವಾಹದ ತೀವ್ರತೆ ಅಧಿಕವಾಗಿದ್ದು, ಪ್ರವಾಹ ಹಾಗೂ ಭೂಕುಸಿತದಿಂದಾಗಿ 22,624 ಮನೆಗಳು ಹಾನಿಯಾಗಿವೆ.

ಇಂಫಾಲ್‌ವೊಂದರಲ್ಲಿಯೇ ಸುಮಾರು 5200 ಜನರನ್ನು ಪ್ರವಾಹಪೀಡಿತ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಮಾಹಿತಿಯೊಂದರ ಪ್ರಕಾರ ಇಂಫಾಲ್‌ನ 176 ಗ್ರಾಮಗಳ ಪೈಕಿ ಸುಮಾರು ೧೦೬ ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿವೆ. ಒಟ್ಟಾರೆ ರಾಜ್ಯದ 149 ನಿರಾಶ್ರಿತರ ಕೇಂದ್ರಗಳಲ್ಲಿ ಸುಮಾರು 32,591 ಜನರಿಗೆ ಆಶ್ರಯ ನೀಡಲಾಗಿತ್ತು. ಅಲ್ಲದೆ 49494 ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಲಾಗಿತ್ತು.

ಮಣಿಪುರ ಮತ್ತು ದಕ್ಷಿಣ ಅಸ್ಸಾಂನ ಬಾರಾಕ್ ಕಣಿವೆಯಲ್ಲಿ ಭೂಕುಸಿತ ಉಂಟಾದ ಪರಿಣಾಮ ಸಂಪರ್ಕ ಕಡಿತಗೊಂಡಿತ್ತು. ಈಗಲೂ ಸಹ ಬಿಷ್ಣುಪುರ ಮತ್ತು ಥಂಬೋಲ ಜ್ಲಿಲೆಯ ನಂಬೋಲ್ ಮತ್ತು ಥಂಬೋಲ್ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಎಚ್ಚರಿಸಿದ್ದಾರೆ. ಮಣಿಪುರದ ಬಹುತೇಕ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.

ನಾಗಾಲ್ಯಾಂಡ್ 

ಪ್ರಸಕ್ತ ವರ್ಷ ಜನವರಿಯಿಂದ ಜುಲೈ ಅಂತ್ಯದವರೆಗೆ ನಾಗಾಲ್ಯಾಂಡ್‌ನಲ್ಲಿ ಭಾರಿ ಮಳೆಯಾಗಿದೆ. ಈ ಮಹಾಮಳೆ ಮತ್ತು ಭೂಕುಸಿತಕ್ಕೆ ರಾಜ್ಯದ ಒಟ್ಟು ಜನಸಂಖ್ಯೆಯ 13.19 ರ ಷ್ಟು ಜನರು ತತ್ತರಿಸಿದ್ದಾರೆ. ಒಟ್ಟಾರೆ 591 ಗ್ರಾಮಗಳ 48,821 ಜನರು ಪ್ರವಾಹಕ್ಕೆ ಸಿಲುಕಿದ್ದರೆ, ೫,೪೦೮ ಎಕರೆ ಕೃಷಿ ಭೂಮಿ ನಾಶವಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಅಂದಾಜಿಸಿದೆ.

ಹಲವರು ಮನೆ, ಕೃಷಿ ಭೂಮಿಯನ್ನು ಕಳೆದುಕೊಂಡಿದ್ದಾರೆ. ಹಲವಡೆದೆ ಭುಕುಸಿತದಿಂದಾಗಿ ರಸ್ತೆ ಸಂಪರ್ಕವೇ ಕಡಿತಗೊಂಡಿದೆ. ನಾಗಾಲ್ಯಾಂಡ್ನಲ್ಲಿ ಉಂಟಾದ ಪ್ರವಾಹದಿಂದ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳಲು
ಪ್ರಾಥಮಿಕ ಹಂತದಲ್ಲಿ ಕನಿಷ್ಠ 800 ಕೋಟಿ ರು. ಬೇಕಾಗಬಹುದೆಂದು ಅಲ್ಲಿನ ಸರ್ಕಾರ ಅಂದಾಜಿಸಲಾಗಿದೆ. 

ಮಿಜೋರಾಂ

ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ಪ್ರಕಾರ ಭೂಕುಸಿತ ಮತ್ತು ಪ್ರವಾಹದಿಂದಾಗಿ ಮಿಜೋರಾಂನ 4 ಜಿಲ್ಲೆಯ 1066 ಕುಟುಂಬಗಳು ಅತಂತ್ರವಾಗಿದ್ದವು. ಪ್ರವಾಹಪೀಡಿತ ಪ್ರದೇಶದಲ್ಲಿದ್ದ 2500 ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರಿಲಾಗಿದೆ.

ಮಾಹಿತಿಯೊಂದರ ಪ್ರಕಾರ ಪ್ರವಾಹದಿಂದಾಗಿ ಮಿಜೋರಾಂನಲ್ಲಿ 600 ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ. ರಾಜ್ಯದ 3 ಜಿಲ್ಲೆಗಳು, 3 ಬ್ಲಾಕ್‌ಗಳು ಮತ್ತು 45 ಹಳ್ಳಿಗಳಲ್ಲಿ ಪ್ರವಾಹಕ್ಕೆ ತುತ್ತಾಗಿವೆ.
ಜೊತೆಗೆ ಈ ಬಾರಿಯ ತೀವ್ರ ಮಳೆ ಮಿಜೋರಾಂನ ಲಂಗ್ಲೇ ಜಿಲ್ಲೆಯು ರಾಜ್ಯ ರಾಜಧಾನಿಯಿಂದ ಸಂಪರ್ಕ ಕಡಿದುಕೊಂಡಿದೆ. 

ತ್ರಿಪುರ

ತ್ರಿಪುರದಲ್ಲಿಯೂ ಸಹ ತೀವ್ರ ಮಳೆಯಿಂದಾಗಿ ರಾಜ್ಯದ  8 ಜಿಲ್ಲೆಗಳ ಪೈಕಿ 7 ಜಿಲ್ಲೆಗಳು ಪ್ರವಾಹಕ್ಕೆ ಒಳಗಾಗಿದ್ದು, ಮಗು ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಪ್ರವಾಹಕ್ಕೆ ಸಿಲುಕಿದ ಸುಮಾರು 40 ಸಾವಿರ ಜನರಿಗೆ 189 ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿತ್ತು.

ಮೇಘಾಲಯ

ರಾಜ್ಯದ ಬಹುತೇಕ ಕಡೆ ಮಳೆ ಹಾಗೂ ಭೂಕುಸಿತದಿಂದ ಸಾಕಷ್ಟು ಹಾನಿಯಾಗಿದೆ. ಭೂಕುಸಿತದಿಂದಾಗಿ ರಸ್ತೆಗಳು ಬ್ಲಾಕ್ ಆಗಿದ್ದು, ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ.

-ಸಾಂದರ್ಭಿಕ ಚಿತ್ರ