ಅಕ್ರಮ ದಾಖಲೆ ಸೃಷ್ಟಿಸಿ ಸಾವಿರಾರು ರೈತರಿಗೆ ಜಮೀನು ಮಂಜೂರು : ಭಾರೀ ಹಗರಣ ಬಯಲಿಗೆ

Thousand Of Acre Land Distribute Illegally Says Kumar Bangarappa
Highlights

ಬಗರ್‌ಹುಕುಂ ಸಾಗುವಳಿ ಜಮೀನು ಮಂಜೂರಾತಿ ರಿಯಲ್‌ ಎಸ್ಟೇಟ್‌ ದಂಧೆಯಾಗಿ ಮಾರ್ಪಟ್ಟಿದೆ. ಸೊರಬ ಕ್ಷೇತ್ರವೊಂದರಲ್ಲೇ 3,668 ಮಂದಿಗೆ ಅಕ್ರಮ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಮಂಜೂರು ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಆರೋಪ ಮಾಡಿದ್ದಾರೆ. 

ವಿಧಾನಸಭೆ :  ಬಗರ್‌ಹುಕುಂ ಸಾಗುವಳಿ ಜಮೀನು ಮಂಜೂರಾತಿ ರಿಯಲ್‌ ಎಸ್ಟೇಟ್‌ ದಂಧೆಯಾಗಿ ಮಾರ್ಪಟ್ಟಿದೆ. ಸೊರಬ ಕ್ಷೇತ್ರವೊಂದರಲ್ಲೇ 3,668 ಮಂದಿಗೆ ಅಕ್ರಮ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಮಂಜೂರು ಮಾಡಲಾಗಿದೆ. ಹೀಗಾಗಿ ತೀರ್ಥಹಳ್ಳಿ, ಚಿಕ್ಕನಾಯನಕಹಳ್ಳಿ, ಹೊಸದುರ್ಗ, ಸೊರಬ ಹಾಗೂ ಸಾಗರ ಕ್ಷೇತ್ರಗಳ ಬಗರ್‌ಹುಕುಂ ಮಂಜೂರಾತಿ ಬಗ್ಗೆ ಸಿಐಡಿ ತನಿಖೆ ನಡೆಯಬೇಕು ಎಂದು ಬಿಜೆಪಿ ಶಾಸಕರು ಆಗ್ರಹ ಮಾಡಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸೊರಬ ಶಾಸಕ ಕುಮಾರ್‌ ಬಂಗಾರಪ್ಪ, ಬಗರ್‌ಹುಕುಂನಿಂದ ರೈತರಿಗೆ ಸಹಾಯ ಮಾಡುವ ಬದಲು ರಿಯಲ್‌ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದಾರೆ. ತಹಸೀಲ್ದಾರ್‌ ಅವರಿಂದ ಜಿಲ್ಲಾಧಿಕಾರಿವರೆಗೆ ಅಧಿಕಾರಿಗಳು ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಸಾವಿರಾರು ಎಕರೆ ಸರ್ಕಾರಿ ಜಮೀನು ಅಕ್ರಮವಾಗಿ ಮಂಜೂರಾತಿ ಮಾಡಿದ್ದಾರೆ.

ಸೊರಬ ಕ್ಷೇತ್ರದಲ್ಲಿ 3,668 ಪ್ರಕರಣಗಳು ಅಕ್ರಮವಾಗಿವೆ. ಸರ್ಕಾರಿ ನೆಡುತೋಪು, ಸ್ಮಶಾನ ಸೇರಿ ನಿಯಮಗಳ ವಿರುದ್ಧವಾಗಿ ಎಲ್ಲವನ್ನೂ ಮಂಜೂರು ಮಾಡಿದ್ದಾರೆ. ಸರ್ಕಾರ ಶ್ರೀಗಂಧದ ಮರ ನೆಟ್ಟಿರುವ ನೆಡುತೋಪು ಕೂಡ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಬಗರ್‌ಹುಕುಂ ಅಡಿ ಮಂಜೂರು ಮಾಡಿದ್ದಾರೆ. ಅಲ್ಲದೆ, 1991ರ ಬಳಿಕ ಸಾಗುವಳಿ ಮಾಡಿರುವವರಿಗೆ ಮಂಜೂರು ಮಾಡಬಾರದು ಎಂಬ ನಿಯಮವಿದ್ದರೂ 1991-92 ಜನ್ಮ ದಿನಾಂಕ ಇರುವ ಯುವಕರಿಗೆ ಮಂಜೂರು ಮಾಡಿದ್ದಾರೆ. ಅವರು ಹೇಗೆ ಹತ್ತಾರು ವರ್ಷ ಸಾಗುವಳಿ ಮಾಡಿರಲು ಸಾಧ್ಯ ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ, ನಮ್ಮ ಕ್ಷೇತ್ರದಲ್ಲೂ ಅಧಿಕಾರಿಗಳು ಸಾಕಷ್ಟುಅವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ಹಿಂದಿನ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರಿಗೆ ದಾಖಲೆಗಳ ಸಹಿತ ದೂರು ನೀಡಲಾಗಿತ್ತು. ಅವರು ತನಿಖೆಗೆ ಆದೇಶಿಸಿದ್ದರು. ಆದರೆ, ಯಾರು ತನಿಖೆ ಮಾಡುತ್ತಿದ್ದಾರೆ ಎಂಬುದೇ ಗೊತ್ತಿಲ್ಲ. ಇದರಲ್ಲಿ ಅಧಿಕಾರಿಗಳೇ ಶಾಮೀಲು ಆಗಿರುವುದರಿಂದ ಸಿಐಡಿ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಸಾಗರ ಶಾಸಕ ಹಾಲಪ್ಪ, ತಮ್ಮ ಕ್ಷೇತ್ರದ ಜೋಳದಗುಂಟೆಯಲ್ಲಿ ಸ್ಮಶಾನ, ಬಸ್ತಿಕೊಪ್ಪದಲ್ಲಿ ಕಾಡು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಹೊಸದುರ್ಗದ ಗೂಳಿಹಟ್ಟಿಶೇಖರ್‌ ಧ್ವನಿಗೂಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್‌, ಸೀಮಿತ ಪ್ರಕರಣಗಳು ಇದ್ದರೆ ದಾಖಲೆ ಕೊಡಿ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಮ್ಮ ಬಳಿ ಎಲ್ಲಾ ಪ್ರಕರಣಗಳ ದಾಖಲೆಗಳು ಇರಲು ಸಾಧ್ಯವಿಲ್ಲ. ನಾವು ನಮ್ಮ ಬಳಿ ಇರುವ ಅಕ್ರಮಗಳ ದಾಖಲೆ ನೀಡುತ್ತೇವೆ. ನೀವು ಸಂಪೂರ್ಣ ಸಿಐಡಿ ತನಿಖೆಗೆ ನಡೆಸಿದರೆ ಅಕ್ರಮಗಳು ಬಯಲಿಗೆ ಬರಲಿವೆ ಎಂದು ಒತ್ತಾಯ ಮಾಡಿದರು. ಸಭಾಧ್ಯಕ್ಷರ ಸ್ಥಾನದಲ್ಲಿದ್ದ ತನ್ವೀರ್‌ ಸೇಠ್‌ ಮುಖ್ಯಮಂತ್ರಿಗಳ ಉತ್ತರದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

loader