ಮಕ್ಕಳ ಹಕ್ಕುಗಳ ರಕ್ಷಣೆಗೆ ನಿಲ್ಲುವ ಹೀಗೋಬ್ಬ ಅಪರೂಪದ ಸಾಧಕಿ

First Published 29, Jan 2018, 6:36 PM IST
This Women Achieve in Social Service
Highlights

ಮಕ್ಕಳ ಹಕ್ಕುಗಳಿಗಾಗಿ ದೊಡ್ಡವರು, ಚಿಂತಕರು ಹೋರಾಡುವುದನ್ನು ಕೇಳಿದ್ದೇವೆ. ಕಂಡಿದ್ದೇವೆ. ಆದರೆ ಮಕ್ಕಳ ಹಕ್ಕುಗಳಿಗಾಗಿ ಮಕ್ಕಳೇ ಮುಂದಾಗಿ ನಿಲ್ಲುವುದು ಅಪರೂಪ. ಅಂಥ ಅಪರೂಪದ ಸಾಧಕಿ ಮಂಜುಳಾ ಮುನವಳ್ಳಿ.

ಬೆಂಗಳೂರು (ಜ.29): ಮಕ್ಕಳ ಹಕ್ಕುಗಳಿಗಾಗಿ ದೊಡ್ಡವರು, ಚಿಂತಕರು ಹೋರಾಡುವುದನ್ನು ಕೇಳಿದ್ದೇವೆ. ಕಂಡಿದ್ದೇವೆ. ಆದರೆ ಮಕ್ಕಳ ಹಕ್ಕುಗಳಿಗಾಗಿ ಮಕ್ಕಳೇ ಮುಂದಾಗಿ ನಿಲ್ಲುವುದು ಅಪರೂಪ. ಅಂಥ ಅಪರೂಪದ ಸಾಧಕಿ ಮಂಜುಳಾ ಮುನವಳ್ಳಿ.

2013 ರಲ್ಲಿ ಕಿಡ್ಸ್ ಎನ್ನುವ ಸಂಸ್ಥೆಯ ಗುಬ್ಬಚ್ಚಿ ಮಕ್ಕಳ ಸಂಘದ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುಳಾಗೆ ಆಗಿನ್ನೂ ಹದಿನಾರು ವರ್ಷದ ಪ್ರಾಯ. ಆ ವೇಳೆಯಲ್ಲೇ ಮಕ್ಕಳ ಹಕ್ಕುಗಳ ಕುರಿತಾದ ಉಪನ್ಯಾಸಗಳನ್ನು ತಾಲೂಕು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಂಚರಿಸಿ ಮಾಡುತ್ತಿದ್ದರು. ಮಂಜುಳಾ ಅವರ ಮಕ್ಕಳ ಹಕ್ಕುಗಳ ಬಗೆಗಿನ ಆಸಕ್ತಿ ನೋಡಿ 2013, ಅಕ್ಟೋಬರ್‌ನಲ್ಲಿ ಜಿನೇವಾದಲ್ಲಿ ನಡೆದ ಮಕ್ಕಳ ಹಕ್ಕುಗಳ ಅಂತಾರಾಷ್ಟ್ರೀಯ ಸಮಾವೇಶಕ್ಕೆ ವಿಶೇಷ ಉಪನ್ಯಾಸ ನೀಡಲು ಆಯ್ಕೆ ಮಾಡಲಾಯಿತು.

ಸಮಾವೇಶದಲ್ಲಿ ಗಂಭೀರ ವಿಚಾರದ ಬಗ್ಗೆ ಕನ್ನಡದಲ್ಲಿಯೇ ವಿಚಾರ ಮಂಡನೆ ಮಾಡಿದ ಮಂಜುಳಾ ಅವರ ಮಾತುಗಳ ಕುರಿತು ತಜ್ಞರು ಗಂಟೆಗಳ ಕಾಲ ಚರ್ಚೆ ನಡೆಸಿದರು. ಇದರಿಂದಾಗಿ ದೇಶವನ್ನು ಪ್ರತಿನಿಧಿಸಿದ್ದ ಮಂಜುಳಾ ಗಂಭೀರ ವಿಚಾರವೊಂದರ ಬಗ್ಗೆ ಉತ್ತಮವಾಗಿ ಮಾತನಾಡಿದರು ಎನ್ನುವ ಅಭಿದಾನಕ್ಕೆ ಪಾತ್ರವಾಗಿದ್ದರು. ಧಾರವಾಡ ಜಿಲ್ಲೆಯ ರಾಮಾಪುರದವರಾದ ಮಂಜುಳಾ ಜಿನೇವಾದಿಂದ ವಾಪಸ್ಸಾದ ನಂತರವೂ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸದ್ಯ ವಿಶ್ವ ಸಂಸ್ಥೆ ಆಯೋಜಿಸಿರುವ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ‘ಮಕ್ಕಳ ಧ್ವನಿ’ ಎಂಬ ಕಾರ್ಯಕ್ರಮದ ಭಾಗವಾಗಿ ಕಾರ್ಯ ನಿರ್ವಹಿಸಿ ನಾಡಿನಾದ್ಯಂತ ಶಾಲಾ-ಕಾಲೇಜುಗಳಿಗೆ ಹೋಗಿ ಉಪನ್ಯಾಸಗಳನ್ನು ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.

‘ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದು ನನ್ನ ಪಾಲಿಗೆ ಸಂತಸದ ಸಂಗತಿ. ಮುಂದೆ ಇನ್ನಷ್ಟು ವ್ಯಾಪಕವಾಗಿ ಎನ್‌ಜಿಓ ಮೂಲಕ ಮಕ್ಕಳು, ಮಹಿಳೆಯರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತೇನೆ’ ಎಂದು ಹೇಳಿಕೊಳ್ಳುವ ಮಂಜುಳಾ ಮುನವಳ್ಳಿ ಅವರಿಗೆ ನಿಮ್ಮ ಕಡೆಯಿಂದ ಒಂದು ಥ್ಯಾಂಕ್ಸ್ ಹೇಳಿ. ದೂರವಾಣಿ: 7353250015

- ವರದಿ ಮಂಜುನಾಥಗ ಗದಗಿನ

 

loader