Asianet Suvarna News Asianet Suvarna News

ಈ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾಗಳಷ್ಟೇ ಪ್ರದರ್ಶನ

ಅಪರೂಪದ ಚಲನ ಚಿತ್ರಮಂದಿರ ವಾಣಿಜ್ಯ ನಗರಿ, ಛೋಟಾ ಮುಂಬೈ ಎಂದೇ ಖ್ಯಾತವಾಗಿರುವ ಹುಬ್ಬಳ್ಳಿಯ ಹೃದಯ ಭಾಗದಲ್ಲಿದೆ. ನಾಲ್ಕು ದಶಕಗಳಿಂದ ಇಲ್ಲಿ ಕನ್ನಡ ಚಿತ್ರಗಳು ಮಾತ್ರವೇ ಪ್ರದರ್ಶನಗೊಳ್ಳುತ್ತಿವೆ. 

This Theater Releases Only Kannada Film Till 4 Decades
Author
Bengaluru, First Published Nov 2, 2018, 9:12 AM IST

ಹುಬ್ಬಳ್ಳಿ :  ಕಳೆದ ನಾಲ್ಕು ದಶಕಗಳಿಂದ ಇಲ್ಲಿ ಕನ್ನಡ ಚಿತ್ರಗಳು ಮಾತ್ರವೇ ಪ್ರದರ್ಶನಗೊಳ್ಳುತ್ತಿವೆ. ಒಂದೇ ಒಂದು ಪರಭಾಷೆ ಚಿತ್ರವೂ ಇಲ್ಲಿ ತೆರೆ ಕಂಡಿಲ್ಲ. 2184 ವಾರಗಳ ಕಾಲ ಈ ಚಿತ್ರಮಂದಿರದಲ್ಲಿ ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ.’

ಹೌದು. ಇಂತಹ ಅಪರೂಪದ ಚಲನ ಚಿತ್ರಮಂದಿರ ವಾಣಿಜ್ಯ ನಗರಿ, ಛೋಟಾ ಮುಂಬೈ ಎಂದೇ ಖ್ಯಾತವಾಗಿರುವ ಹುಬ್ಬಳ್ಳಿಯ ಹೃದಯ ಭಾಗದಲ್ಲಿದೆ. ಅದೇ ‘ಸಂಜೋತಾ’ ಚಿತ್ರಮಂದಿರ.

1976ರಲ್ಲಿ ಆರಂಭವಾದ ಈ ಚಿತ್ರಮಂದಿರದಲ್ಲಿ ನಿತ್ಯವೂ ಕನ್ನಡ ದಿಂಡಿಮ ಮೊಳಗುತ್ತಿದೆ. ಎಷ್ಟೇ ಒತ್ತಡ, ಬಲವಂತ ಬಂದರೂ ಇದರ ಮಾಲೀಕರು ಕನ್ನಡ ಬಿಟ್ಟು ಬೇರೆ ಚಿತ್ರ ಪ್ರದರ್ಶಿಸುವ ಮನಸ್ಸು ಮಾಡಿಲ್ಲ. ಇದಕ್ಕೆ ಅಂಟಿಕೊಂಡಿರುವ ಇದೇ ಮಾಲೀಕರ ‘ಸುಜಾತಾ’ ಚಿತ್ರಮಂದಿರ ತನ್ನ 43 ವರ್ಷದ ಇತಿಹಾಸದಲ್ಲಿ ಯಾವುದೋ ಒತ್ತಡಕ್ಕೆ ಮಣಿದು ಒಂದು ಇಂಗ್ಲಿಷ್‌, ಮೂರು ಹಿಂದಿ ಚಿತ್ರಗಳನ್ನು ಪ್ರದರ್ಶಿಸಿದ್ದುಂಟು. ಅದನ್ನು ಹೊರತುಪಡಿಸಿದರೆ ಕನ್ನಡ ಚಿತ್ರಗಳೇ ಪ್ರದರ್ಶನಗೊಂಡಿವೆ. ಎಷ್ಟೋ ಚಿತ್ರಗಳು ಶತದಿನೋತ್ಸವ ಕಂಡಿವೆ. ಪರಭಾಷಾ ಚಿತ್ರಗಳ, ಪ್ರದರ್ಶಕರ ಹಾವಳಿಯ ನಡುವೆಯೂ ಇವು ಕನ್ನಡವನ್ನೇ ಉಸಿರಾಡುತ್ತಿರುವುದು ಹೆಮ್ಮೆಯ ಸಂಗತಿ.

ಇವೆರಡೂ ಚಿತ್ರಮಂದಿರಗಳು ನಗರದ ಹಳೆ ಬಸ್‌ ನಿಲ್ದಾಣ, ಇಂದಿರಾ ಗಾಜಿನ ಮನೆ ಪಕ್ಕದಲ್ಲೇ ಇವೆ. ರೈಲ್ವೆ ನಿಲ್ದಾಣವೂ ಸಮೀಪದಲ್ಲಿದೆ. ಹುಬ್ಬಳ್ಳಿ ರೈಲು ನಿಲ್ದಾಣ, ರೈಲ್ವೆ ಕಾರ್ಯಾಗಾರ ಸೇರಿದಂತೆ ಸುತ್ತಮುತ್ತ ಸಾವಿರಾರು ಸಂಖ್ಯೆಯಲ್ಲಿ ತೆಲುಗು, ತಮಿಳು, ಹಿಂದಿ ಭಾಷಿಕರು ವಾಸಿಸುತ್ತಿದ್ದಾರೆ. ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೂ ಈ ಚಿತ್ರಮಂದಿರಗಳು ಹತ್ತಿರದಲ್ಲೇ ಇವೆ. ಹಾಗಾಗಿ ತೆಲುಗು, ತಮಿಳು, ಹಿಂದಿ ಚಿತ್ರಮಂದಿರ ಪ್ರದರ್ಶಿಸಿದ್ದರೆ ಹೆಚ್ಚಿನ ಲಾಭವನ್ನೂ ಮಾಡಿಕೊಳ್ಳುವ ಅವಕಾಶ ಮಾಲೀಕರಿಗೆ ಇತ್ತು. ಆದರೆ ಮಾಲಿಕರು ಆ ಬಗ್ಗೆ ಚಿಂತಿಸದೇ ಕನ್ನಡ ಕಟ್ಟುವ ಕೆಲಸಕ್ಕೆ ಕೈಜೋಡಿಸಿ ಕನ್ನಡಕ್ಕಾಗಿಯೇ ಚಿತ್ರಮಂದಿರ ಮುಂಡಿಪಿಟ್ಟಿದ್ದಾರೆ.

ಸೂಜಿ ಕನ್ನಡ ಅಭಿಮಾನ:

ಈ ಎರಡು ಚಿತ್ರ ಮಂದಿರಗಳಿಗೆ ಡಿ.ಎನ್‌. ಸೂಜಿ ಎಂಬವರು ಮಾಲೀಕರು. ಸದ್ಯ ಅವರಿಲ್ಲ. ಅವರ ಸಹೋದರ ಮಹಾವೀರ ಸೂಜಿ ನಿಭಾಯಿಸಿಕೊಂಡು ಹೋಗುತ್ತಾರೆ. ಡಿ.ಎನ್‌. ಸೂಜಿ ಅವರಿಗೆ ಕನ್ನಡದ ಬಗ್ಗೆ ಬಹಳ ಪ್ರೀತಿ, ಅಭಿಮಾನ. ತಾವು ಆರಂಭಿಸಿದ ಚಿತ್ರಮಂದಿರಗಳಲ್ಲಿ ಬರೀ ಕನ್ನಡ ಚಿತ್ರಗಳನ್ನಷ್ಟೇ ಬಿಡುಗಡೆ ಮಾಡುವ ಮೂಲಕ ಕನ್ನಡಾಂಬೆಗೆ ತಮ್ಮದೇಯಾದ ರೀತಿಯಲ್ಲಿ ಸೇವೆ ಸಲ್ಲಿಸಬೇಕು ಎನ್ನುವ ಅದಮ್ಯ ಹಂಬಲ ಅವರದು. ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಬಂದಿದ್ದಾರೆ.

ಆದರೂ ಸುಜಾತಾ ಚಿತ್ರಮಂದಿರದಲ್ಲಿ ಒತ್ತಡಕ್ಕೆ ಮಣಿದು ಒಂದು ಬಾರಿ ಇಂಗ್ಲಿಷ್‌ ಹಾಗೂ ಇನ್ನೂ ಮೂರು ಬಾರಿ ಹಿಂದಿ ಚಿತ್ರಗಳನ್ನು ಬಿಡುಗಡೆ ಮಾಡಿದ್ದುಂಟು. ಆದರೆ, ಸಂಜೋತಾ ಟಾಕೀಸ್‌ನಲ್ಲಿ ಮಾತ್ರ ಬರೀ ಕನ್ನಡ ಚಿತ್ರಗಳನ್ನಷ್ಟೇ ಬಿಡುಗಡೆ ಮಾಡುತ್ತೇವೆ ಎಂದು ಸಂಕಲ್ಪ ಮಾಡಿ ಅದರಂತೆ ಈಗಲೂ ಬರೀ ಕನ್ನಡ ಚಿತ್ರಗಳಿಗಷ್ಟೇ ಮೀಸಲಿಡಲಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಚಿತ್ರಮಂದಿರದ ಸಿಬ್ಬಂದಿ.

ಕನಸು ನನಸು ಮೊದಲ ಚಿತ್ರ:

ಶ್ರೀನಾಥ- ಮಂಜುಳಾ ಜೋಡಿಯ ‘ಪ್ರಣಯರಾಜ’, ರೆಬೆಲ್‌ ಸ್ಟಾರ್‌ ಅಂಬರೀಶ್‌ ಅಭಿನಯದ ‘ಕನಸು ನನಸು’ ಈ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಚಿತ್ರಗಳು. ಎರಡೂ ಒಂದು ವರ್ಷ ಪ್ರದರ್ಶನಗೊಂಡಿವೆ. ಗಿರಿಕನ್ಯೆ, ಸನಾದಿ ಅಪ್ಪಣ್ಣ, ಶಂಕರಗುರು ಸೇರಿದಂತೆ ಹಲವು ಚಿತ್ರಗಳು ವರ್ಷಗಟ್ಟಲೇ ಇಲ್ಲಿ ಪ್ರದರ್ಶನ ಕಂಡಿದ್ದುಂಟು. ಕಳೆದ 10 ವರ್ಷಗಳ ಹಿಂದೆ ತೆರೆ ಕಂಡಿದ್ದ ಮುಂಗಾರು ಮಳೆ ಕೂಡ ಒಂದು ವರ್ಷ ಪ್ರದರ್ಶನವಾಗಿರುವುದು ಇತ್ತೀಚಿನ ದಾಖಲೆ. ಇದನ್ನು ಹೊರತುಪಡಿಸಿ ಈ ಚಿತ್ರಮಂದಿರದಲ್ಲಿ ಆನಂದ, ನಂಜುಂಡಿ ಕಲ್ಯಾಣ, ಜನುಮದ ಜೋಡಿ, ಜೋಡಿಹಕ್ಕಿ ಹೀಗೆ ಸುಮಾರು 500ಕ್ಕೂ ಅಧಿಕ ಚಿತ್ರಗಳು ಈ ಮಂದಿರದಲ್ಲಿ ಬಿಡುಗಡೆಯಾಗಿ ಸಾಕಷ್ಟುಯಶಸ್ಸು ಕಂಡಿವೆ.


ನಮ್ಮ ಹಿರಿಯ ಸಹೋದರ ಡಿ.ಎನ್‌. ಸೂಜಿ ಆರಂಭಿಸಿದ ಚಿತ್ರಮಂದಿರಗಳಿವು. ಸುಜಾತಾದಲ್ಲಿ ಮೂರು ಬಾರಿ ಹಿಂದಿ ಹಾಗೂ ಒಂದು ಬಾರಿ ಆಂಗ್ಲ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಸಂಜೋತಾ ಚಿತ್ರಮಂದಿರದಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆಗಳಿಗೆ ಅವಕಾಶವನ್ನೇ ಕೊಟ್ಟಿಲ್ಲ. ಕನ್ನಡ ಚಿತ್ರಗಳಿಗೆ ಮೀಸಲಿಟ್ಟಿದ್ದೇವೆ. ಮುಂದೆಯೂ ಇದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತೇವೆ.

ಮಹಾವೀರ ಸೂಜಿ, ಚಿತ್ರಮಂದಿರ ಮಾಲೀಕರು

ಶಿವಾನಂದ ಗೊಂಬಿ

Follow Us:
Download App:
  • android
  • ios