ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸ್ಪರ್ಧಿಸಬಹುದಾದ ಕ್ಷೇತ್ರಗಳ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ಇದು ನನ್ನ ಕಡೆಯ ಭಾಷಣ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಮಾತನಾಡಿದ ದೇವೇಗೌಡ, ‘ನಾನು 57  ವರ್ಷ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾರ್ವಜನಿಕ ಜೀವನವನ್ನು ಕಳೆದಿದ್ದೇನೆ. ಇದು ನನ್ನ ಕೊನೆಯ ಭಾಷಣ’ ಎಂದು ಭಾವುಕರಾಗಿ ನುಡಿದರು. 

ಆದರೆ ಇದು ಪ್ರಸಕ್ತ ಲೋಕಸಭೆಯಲ್ಲಿ ತಮ್ಮ ಕಡೆಯ ಭಾಷಣವೋ ಅಥವಾ ತಮ್ಮ ಸಂಸತ್ ರಾಜಕೀಯದ ಕಡೆಯ ಭಾಷಣವೋ ಎಂಬುದರ ಬಗ್ಗೆ ಅವರು ಸುಳಿವು ನೀಡಲಿಲ್ಲ.