ನಾಗ್ಪುರ: ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 126ನೇ ಜನ್ಮದಿನ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಭೀಮ್‌ ಆ್ಯಪ್‌ ಅಡಿಯಲ್ಲಿ ಎರಡು ನೂತನ ಯೋಜನೆಗಳನ್ನು ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದಾರೆ. ಅದರಂತೆ ಭೀಮ್‌ ಆಪ್‌ಅನ್ನು ಬೇರೆಯವರಿಗೆ ಪರಿಚಯಿಸಿದರೆ 10 ರು. ಕ್ಯಾಶ್‌ಬ್ಯಾಕ್‌ ಲಭಿಸಲಿದೆ. ಜತೆಗೆ ಆಧಾರ್‌ ಮತ್ತು ಭೀಮ್‌ ಎರಡನ್ನೂ ಸಂಯೋಜಿಸಿದ ಭೀಮ್‌ ಆಧಾರ್‌ ಆ್ಯಪ್‌ ಅನ್ನು ಬಿಡುಗಡೆ ಮಾಡಲಾಗಿದೆ. ಈ ಆ್ಯಪ್‌ನಲ್ಲಿ ಜನರು ಬಯೋಮೆಟ್ರಿಕ್‌ ರೀಡರ್‌ ಅಳವಡಿಸಿದ ಸ್ಮಾರ್ಟ್‌ಫೋನ್‌ ಮೂಲಕ ಡಿಜಿಟಲ್‌ ಪಾವತಿಗಳನ್ನು ಮಾಡಬಹುದಾ​ಗಿದೆ. ಸಣ್ಣ ಮೊತ್ತದ ಹಣವನ್ನೂ ಇದರಿಂದ ಪಾವತಿಸಲು ಸಾಧ್ಯ.

1 ‘ಆಧಾರ್‌ ಪೇ' ಎಂಬುದು ಆಧಾರ್‌ ಆಧರಿತ ಪಾವತಿ ವ್ಯವಸ್ಥೆಯ ವ್ಯಾಪಾ​ರಿಗಳ ಆವೃತ್ತಿ. ಕ್ರೆಡಿಟ್‌/ಡೆಬಿಟ್‌ ಕಾರ್ಡು, ಮೊಬೈಲ್‌ ವ್ಯಾಲೆಟ್‌, ಮೊಬೈಲ್‌ ಫೋನ್‌ ಇಲ್ಲದವರಿಗೆ ಇದು ಅನುಕೂಲ.

2 ಕೇವಲ ವ್ಯಾಪಾರಿಗಳು ‘ಆಧಾರ್‌ ಪೇ' ಇಟ್ಟುಕೊಂಡಿದ್ದರೆ ಸಾಕು. ಅಂತೆಯೇ ಬಳಕೆದಾರ ಗ್ರಾಹಕರು ಆಧಾರ್‌ ಸಂಯೋ​ಜಿತ ಬ್ಯಾಂಕ್‌ ಖಾತೆ ಹೊಂದಿದ್ದರೆ ಸಾಕು. ಆಗ ವ್ಯಾಪಾರಿ ತನ್ನ ಬಳಿ ಇರುವ ಆಧಾರ್‌ ಪೇ ಆ್ಯಪ್‌ ಮೂಲಕ ಗ್ರಾಹಕನ 12 ಅಂಕಿಯ ಆಧಾ​ರ್‌ ಸಂಖ್ಯೆ ಬಳಸಿ ಆತನ ಬ್ಯಾಂಕ್‌ ಖಾ​ತೆಯ ಮೂಲಕ ಹಣ ಪಡೆಯಬಹುದು.

3 ಪ್ಲೇಸ್ಟೋರ್‌ ಅಥವಾ ಐಟ್ಯೂನ್‌ ಮೂಲಕ ವ್ಯಾಪಾರಿಗಳು ಆಧಾರ್‌ ಪೇ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆಧಾರ್‌ ಸಂಖ್ಯೆ ನಮೂದಿಸಿ ಹಾಗೂ ಬೆರಳಚ್ಚು ಬಳಸಿ ಲಾಗಿನ್‌ ಆಗಬಹುದು. ಒಮ್ಮೆ ರಿಜಿಸ್ಟರ್‌ ಮಾಡಿಕೊಂಡರೆ ಸಾಕು ವ್ಯಾಪಾರಿಗಳು ಆ್ಯಪ್‌ ಬಳಸಲು ಅರ್ಹ.

4 ಗ್ರಾಹಕರು ಯಾವುದೇ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌, ಮೊಬೈಲ್‌ ಫೋನ್‌, ಮೊಬೈಲ್‌ಗೆ ಇಂಟರ್ನೆಟ್‌ ಸಂಪರ್ಕ ಹೊಂದಬೇಕಾದ ಅಗತ್ಯ ಇಲ್ಲ. ಯಾವುದೇ ಸ್ಪೈಪಿಂಗ್‌ ಮಶಿನ್‌, ಆ್ಯಪ್‌, ಇಂಟರ್ನೆಟ್‌ ಗೊಡವೆ ಇಲ್ಲದೇ ಗ್ರಾಹಕರು ಆಧಾರ್‌ ಪೇ ಹೊಂದಿದ ವ್ಯಾಪಾರಿಗಳಿಗೆ ನಗದುರಹಿತ ಹಣ ಪಾವತಿಸಬಹುದು.

5 ಆಧಾರ್‌ ಪೇ ಬಳಸಿದರೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲ. ನೀತಿ ಆಯೋಗದ ಪ್ರಕಾರ ಆಧಾರ್‌ ಪೇ ಅತ್ಯಂತ ಸುರಕ್ಷಿತ.