ಮಗುವಿಗೆ ಎದೆ ಹಾಲುಣಿಸುವ ತಾಯಂದಿರಿಗೆ ಇಲ್ಲಿದೆ ಒಂದು ಶುಭ ಸುದ್ದಿ. ನೀವಿನ್ನು ಮಗುವಿಗೆ ಹಾಲುಣಿಸಲು ಬಸ್ ಸ್ಟಾಂಡ್ ನಲ್ಲಿ ಮುಜುಗರ ಪಡಬೇಕಾದ ಅವಶ್ಯಕತೆ ಇಲ್ಲ.
ಸಂದೀಪ್ ವಾಗ್ಲೆ
ಮಂಗಳೂರು : ಹಸುಗೂಸು ಎತ್ತಿಕೊಂಡು ಸರ್ಕಾರಿ ಬಸ್ ನಿಲ್ದಾಣಕ್ಕೆ ಬರುತ್ತೀರಿ. ಮಗು ಹಸಿವೆಯಿಂದ ಅಳುತ್ತಿರುತ್ತದೆ. ಎದೆಹಾಲು ಉಣಿಸಬೇಕೆಂದರೆ ಸುತ್ತ ಸಾವಿರಾರು ಕಣ್ಣುಗಳು. ಕೆಲವೊಮ್ಮೆ ಮುಜುಗರದ ನಡುವೆಯೇ ಮಗುವಿಗೆ ಹಾಲು ಕುಡಿಸುವ ಅನಿವಾರ್ಯತೆಗೆ ಸಿಲುಕುತ್ತೀರಿ.
ಇನ್ನು ಮುಂದೆ ಇಂಥ ಮುಜುಗರಕ್ಕೆ ಮಹಿಳೆ ಯರು ಒಳಗಾಗಬೇಕಿಲ್ಲ. ಕಾರಣ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಶಿಶು ಆರೈಕೆ ಮತ್ತು ಮಹಿಳೆಯರ ವಿಶ್ರಾಂತಿಗೆಂದೇ ಪ್ರತ್ಯೇಕ ಕೊಠಡಿಯೊಂದನ್ನು ವ್ಯವಸ್ಥೆಗೊಳಿಸಲಾಗುತ್ತಿದೆ. ದ.ಕ, ಉಡುಪಿ, ಕೊಡಗು ಜಿಲ್ಲೆಗಳ ಅನೇಕ ಕಡೆಗಳಲ್ಲಿ ಶಿಶು ಆರೈಕೆ ಕೇಂದ್ರ ಮತ್ತು ಮಹಿಳೆಯರ ವಿಶ್ರಾಂತಿ ಗೃಹ (ಒಂದೇ ಕೊಠಡಿ) ಈಗಾಗಲೇ ಅನುಷ್ಠಾನಕ್ಕೆ ಬಂದಿದೆ.
ಉಳಿದ ಕಡೆಗಳಲ್ಲಿ ಬಿರುಸಿನಿಂದ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲೇ ಮಹಿಳೆಯರ ಉಪಯೋಗಕ್ಕೆ ಮುಕ್ತವಾಗಲಿವೆ. ಎಲ್ಲೆಲ್ಲಿ ಆಗಿದೆ?: ಕೆಎಸ್ಸಾರ್ಟಿಸಿಯಲ್ಲಿ ದ.ಕ., ಉಡುಪಿ, ಕೊಡಗು ಜಿಲ್ಲೆಗಳು ಎರಡು ವಿಭಾಗೀಯ ಕಚೇರಿ ನಿಯಂತ್ರಣಕ್ಕೆ ಒಳಪಡುತ್ತವೆ. ಮಂಗಳೂರು ವಿಭಾಗದಲ್ಲಿ ಉಡುಪಿ ಜಿಲ್ಲೆ ಮತ್ತು ಮಂಗಳೂರು ಒಳಪಟ್ಟರೆ, ಪುತ್ತೂರು ವಿಭಾಗದಲ್ಲಿ ಪುತ್ತೂರು, ಬಂಟ್ವಾಳ, ಧರ್ಮಸ್ಥಳ, ಸುಳ್ಯ ಮತ್ತು ಕೊಡಗು ಜಿಲ್ಲೆ ಒಳಗೊಳ್ಳುತ್ತವೆ. ಪುತ್ತೂರು ವಿಭಾಗದಲ್ಲಿನ ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಪುತ್ತೂರು, ಸುಳ್ಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿ ಶಿಶು ಆರೈಕೆ ಮತ್ತು ಮಹಿಳಾ ವಿಶ್ರಾಂತಿ ಗೃಹವನ್ನು ಕೆಲವು ದಿನಗಳ ಹಿಂದಷ್ಟೆ ಬಳಕೆಗೆ ಮುಕ್ತಗೊಳಿಸಲಾಗಿದೆ.
ಧರ್ಮಸ್ಥಳ, ಬಿ.ಸಿ.ರೋಡ್, ಸುಬ್ರಹ್ಮಣ್ಯ ನಿಲ್ದಾಣಗಳಲ್ಲಿ ಕೊಠಡಿ ಗುರುತಿಸಲಾಗಿದ್ದು, ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ.ಮಂಗಳೂರಿನ ಬಿಜೈನಲ್ಲಿರುವ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಅಂಚೆ ಕಚೇರಿ ಇದ್ದ ಕೊಠಡಿಯನ್ನು ತೆರವುಗೊಳಿಸಲಾಗಿದ್ದು, ಅಲ್ಲಿ ಶಿಶು ಆರೈಕೆ ಕೇಂದ್ರ ಮಾಡಲು ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಕುಂದಾಪುರ ನಿಲ್ದಾಣದಲ್ಲಿ ಕೊಠಡಿ ಗುರುತಿ ಸಲಾಗಿದ್ದು, ಕೆಲಸ ಆರಂಭಿಸಲಾಗಿದೆ. ಉಡುಪಿ ನಿಲ್ದಾಣದಲ್ಲಿ ವ್ಯವಸ್ಥಿತ ಸರ್ಕಾರಿ ಬಸ್ ನಿಲ್ದಾಣ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ.
ಏನೇನು ಸೌಲಭ್ಯ?: ಮಂಗಳೂರು ವಿಭಾಗೀಯ ಬಸ್ ನಿಲ್ದಾಣಗಳಲ್ಲಿ ವ್ಯವಸ್ಥೆಗೊಳಿಸುವ ಶಿಶು ಮತ್ತು ಮಹಿಳಾ ಕೊಠಡಿಗಳಲ್ಲಿ 15 ಮಂದಿ ಕೂರಲು ಕುರ್ಚಿಗಳು, ಒಂದು ಮಂಚ-ಬೆಡ್, ಮಗುವನ್ನು ಮಲಗಿಸಲು ಒಂದು ತೊಟ್ಟಿಲು, ಇದೇ ಕೊಠಡಿಯಲ್ಲಿ ಮಗುವಿಗೆ ಎದೆ ಹಾಲು ಕುಡಿಸಲು ಪ್ರತ್ಯೇಕವಾದ ಪರದೆಯ ವ್ಯವಸ್ಥೆ ಮಾಡಲಾಗುವುದು, ಶೌಚಾಲಯವೂ ಕೊಠಡಿಯ ಒಳಗೇ ಇರಲಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಆದರೆ ಪುತ್ತೂರು ವಿಭಾಗದ ಕೇಂದ್ರಗಳಲ್ಲಿ ಸದ್ಯಕ್ಕೆ ಮಂಚ, ತೊಟ್ಟಿಲು, ಶೌಚಾಲಯ ವ್ಯವಸ್ಥೆ ಮಾಡಲಾಗಿಲ್ಲ. ಉಳಿದಂತೆ ಕನಿಷ್ಠ 10 ಮಂದಿ ಕೂರಲು ಆಸನ, ಎದೆಹಾಲು ಕುಡಿಸಲು ಪರದೆ ವ್ಯವಸ್ಥೆ ಮಾಡಲಾಗಿದೆ. ಎಂದು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ದಿವಾಕರ್ ಎಸ್.ಯರಗೊಪ್ಪ ಹೇಳುತ್ತಾರೆ.
