ಶ್ರೀಕೃಷ್ಣ ಪರಮಾತ್ಮನ ರೀತಿ 16 ಸಾವಿರ ಮಹಿಳಾ ಸಂಗಾತಿಗಳನ್ನು ಹೊಂದುವ ಉದ್ದೇಶದೊಂದಿಗೆ ನೂರಾರು ಮಹಿಳೆಯರು, ಮಕ್ಕಳನ್ನು ಆಶ್ರಮದಲ್ಲಿ ಬಂಧಿಸಿಟ್ಟು, ಅತ್ಯಾಚಾರವೆಸಗುತ್ತಿದ್ದ ಸ್ವಾಮೀಜಿಯೊಬ್ಬನ ಕರ್ಮ ಕಾಂಡ ಬಯಲಾಗಿದ್ದು, ಸದ್ಯ ಆತ ನಾಪತ್ತೆಯಾಗಿದ್ದಾನೆ.
ನವದೆಹಲಿ (ಡಿ.23): ಸ್ವಯಂಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಂ ಸಿಂಗ್ ಪ್ರಕರಣ ಮರೆಯುವ ಮುನ್ನವೇ ಅಂತಹುದೇ ಮತ್ತೊಬ್ಬ ದೇವಮಾನವನ ಅಕ್ರಮ ಈಗ ಬೆಳಕಿಗೆ ಬಂದಿದೆ. ಶ್ರೀಕೃಷ್ಣ ಪರಮಾತ್ಮನ ರೀತಿ 16 ಸಾವಿರ ಮಹಿಳಾ ಸಂಗಾತಿಗಳನ್ನು ಹೊಂದುವ ಉದ್ದೇಶದೊಂದಿಗೆ ನೂರಾರು ಮಹಿಳೆಯರು, ಮಕ್ಕಳನ್ನು ಆಶ್ರಮದಲ್ಲಿ ಬಂಧಿಸಿಟ್ಟು, ಅತ್ಯಾಚಾರವೆಸಗುತ್ತಿದ್ದ ಸ್ವಾಮೀಜಿಯೊಬ್ಬನ ಕರ್ಮ ಕಾಂಡ ಬಯಲಾಗಿದ್ದು, ಸದ್ಯ ಆತ ನಾಪತ್ತೆಯಾಗಿದ್ದಾನೆ.
ಉತ್ತರ ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ಆಧ್ಯಾತ್ಮಿಕ ವಿಶ್ವವಿದ್ಯಾಲಯ ಎಂಬ ಆಶ್ರಮದಲ್ಲಿ ನೂರಾರು ಮಹಿಳೆಯರು ಹಾಗೂ ಮಕ್ಕಳನ್ನು ಪ್ರಾಣಿಗಳ ರೀತಿ ಬಂಧಿಸಿಟ್ಟು, ಅತ್ಯಾಚಾರ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ದೆಹಲಿ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದ್ದು, ಆಶ್ರಮದ ಮುಖ್ಯಸ್ಥ ವೀರೇಂದ್ರ ದೇವ್ ದೀಕ್ಷಿತ್ ಪತ್ತೆ ಹಚ್ಚುವಂತೆ ನಿರ್ದೇಶನ ನೀಡಿದೆ. ಶ್ರೀಕೃಷ್ಣ ಪರಮಾತ್ಮನಿಗೆ 16 ಸಾವಿರ ಹೆಂಡತಿಯರು ಇದ್ದಂತೆ ತಾನು ಕೂಡ 16 ಸಾವಿರ ಮಹಿಳಾ ಸಂಗಾತಿಗಳನ್ನು ಹೊಂದಬೇಕು ಎಂಬ ವಿಚಿತ್ರ ಗುರಿಯನ್ನು ದೀಕ್ಷಿತ್ ಹೊಂದಿದ್ದ ಎನ್ನಲಾಗುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಆಶ್ರಮದಿಂದ ರಕ್ಷಿಸಲ್ಪಟ್ಟ ಮಹಿಳೆಯೊಬ್ಬರು ‘ನೀನು ನನ್ನ 16 ಸಾವಿರ ರಾಣಿಗಳಲ್ಲಿ ಒಬ್ಬಳು’ ಎಂದು ದೀಕ್ಷಿತ್ ಬಾಬಾ ಆಗಾಗ್ಗೆ ಹೇಳುತ್ತಿದ್ದರು, ಅತ್ಯಾಚಾರ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಸಿಬಿಐ ತನಿಖೆಗೆ ಆದೇಶಿಸಲ್ಪಟ್ಟ ಬಳಿಕ 41 ಅಪ್ರಾಪ್ತ ಬಾಲಕಿಯರನ್ನು ದೀಕ್ಷಿತ್ ಬಾಬಾನ ಆಶ್ರಮದಿಂದ ರಕ್ಷಿಸಲಾಗಿದೆ. ಧಾರ್ಮಿಕ ಪ್ರವಚನ ನೀಡುವುದಾಗಿ ಮಹಿಳೆಯರು ಹಾಗೂ ಮಕ್ಕಳನ್ನು ಆಶ್ರಮಕ್ಕೆ ಕರೆಸಿಕೊಳ್ಳುತ್ತಿದ್ದ ಈ ಬಾಬಾ ಬಳಿಕ ಕೂಡಿಹಾಕಿ ಅತ್ಯಾಚಾರ ನಡೆಸುತ್ತಿದ್ದ ಎಂದು ಹೇಳಲಾಗಿದೆ.
