ರಾಜ್ಯ ಸರ್ಕಾರ ಹೊಸ ವರ್ಷದ ಏಪ್ರಿಲ್ 1 ರ ಬಳಿಕ ಬೆಂಗಳೂರ ನಗರದಲ್ಲಿ 2 ಸ್ಟ್ರೋಕ್ ಆಟೋ ಸಂಚಾರ ನಿಷೇಧಿಸಿರುವುದರಿಂದ, ಏಪ್ರಿಲ್ ನಂತರ ನಗರದಲ್ಲಿ ಸಂಚರಿಸುವ 2 ಸ್ಟ್ರೋಕ್ ಆಟೋಗಳನ್ನು ಜಪ್ತಿ ಮಾಡುವುದಾಗಿ ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಬೆಂಗಳೂರು (ಡಿ.27): ರಾಜ್ಯ ಸರ್ಕಾರ ಹೊಸ ವರ್ಷದ ಏಪ್ರಿಲ್ 1 ರ ಬಳಿಕ ಬೆಂಗಳೂರ ನಗರದಲ್ಲಿ 2 ಸ್ಟ್ರೋಕ್ ಆಟೋ ಸಂಚಾರ ನಿಷೇಧಿಸಿರುವುದರಿಂದ, ಏಪ್ರಿಲ್ ನಂತರ ನಗರದಲ್ಲಿ ಸಂಚರಿಸುವ 2 ಸ್ಟ್ರೋಕ್ ಆಟೋಗಳನ್ನು ಜಪ್ತಿ ಮಾಡುವುದಾಗಿ ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಶಾಂತಿನಗರದ ಸಾರಿಗೆ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ 2 ಸ್ಟ್ರೋಕ್ ಆಟೋಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ. ಹಾಗಾಗಿ ನಗರದಲ್ಲಿರುವ 2 ಸ್ಟ್ರೋಕ್ ಆಟೋಗಳನ್ನು ಮುಂದಿನ ಏಪ್ರಿಲ್ 1ರೊಳಗೆ ಹೊರ ಜಿಲ್ಲೆಗಳಿಗೆ ಮಾರಾಟ ಮಾಡಬೇಕು.

ಈಗಾಗಲೇ ನೆಲಮಂಗಲ ಮತ್ತು ರಾಜಾಜಿನಗರದಲ್ಲಿ ಸ್ಕ್ರ್ಯಾಪ್ ಘಟಕ ಆರಂಭಿಸಲಾಗಿದೆ. ಒಂದು ವೇಳೆ ಏಪ್ರಿಲ್ ನಂತರವೂ ನಗರದಲ್ಲಿ 2 ಸ್ಟ್ರೋಕ್ ಆಟೋಗಳು ಸಂಚರಿಸುವುದು ಕಂಡು ಬಂದಲ್ಲಿ ಸಾರಿಗೆ ಇಲಾಖೆ ಅವುಗಳನ್ನು ಜಪ್ತಿ ಮಾಡಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ 4 ಸ್ಟ್ರೋಕ್ ಆಟೋ ಖರೀದಿಗೆ ತಲಾ 30 ಸಾವಿರ ಸಹಾಯಧನ ನೀಡುವ ಯೋಜನೆ ರೂಪಿಸಿದೆ. ಈ ಸಹಾಯಧನ ಪಡೆಯಬೇಕಾದರೆ ಸಾರಿಗೆ ಇಲಾಖೆ ಅನುಮತಿ ನೀಡಿರುವ ಸ್ಕ್ರ್ಯಾಪ್ ಸೆಂಟರ್‌ಗಳಲ್ಲಿ 2 ಸ್ಟ್ರೋಕ್ ಆಟೋಗಳನ್ನು ಸ್ಕ್ರ್ಯಾಪ್ ಮಾಡಬೇಕು. ಬಳಿಕ ಈ ಕೇಂದ್ರಗಳಲ್ಲಿ ನೀಡುವ ಅಧಿಕೃತ ಪ್ರಮಾಣ ಪತ್ರದೊಂದಿಗೆ ಅಗತ್ಯ ದಾಖಲೆಗಳನ್ನು ಸಾರಿಗೆ ಇಲಾಖೆಗೆ ಸಲ್ಲಿಸಬೇಕು ಎಂದು ತಿಳಿಸಿದರು. 

ಇ-ಪರ್ಮಿಟ್‌ಗೆ ಆಧಾರ್ ಕಡ್ಡಾಯ: ನಗರದಲ್ಲಿ ಅಕ್ರಮವಾಗಿ ಸಂಚರಿಸುತ್ತಿರುವ ಆಟೋಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಇ-ಪರ್ಮಿಟ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಪರವಾನಗಿ ಪಡೆದಿರುವ ಆಟೋ ಮಾಲೀಕರು ತಮ್ಮ ಹಳೆಯ ಪರವಾನಗಿ ಜೊತೆಗೆ ಆಧಾರ್ ಗುರುತಿನ ಚೀಟಿಯನ್ನು ಸಾರಿಗೆ ಇಲಾಖೆಗೆ ಒದಗಿಸಬೇಕು. ಈ ದಾಖಲೆಗಳ ಪರಿಶೀಲನೆ ಬಳಿಕ ನಕಲಿಗೆ ಸಾಧ್ಯವಾಗದಂತಾ ಇ-ಪರ್ಮಿಟ್ ನೀಡಲಾಗುವುದು. ಈ ಸಂಬಂಧ ಇಲಾಖೆ ಅಂತಿಮ ತಯಾರಿ ನಡೆಸಿದ್ದು, ಶೀಘ್ರದಲ್ಲೇ ಇ-ಪರ್ಮಿಟ್ ವಿತರಣೆಗೆ ಚಾಲನೆ ನೀಡುವುದಾಗಿ ಹೇಳಿದರು.

120 ಕೇಂದ್ರಗಳ ವಿರುದ್ಧ ಕ್ರಮ: ಬೆಂಗಳೂರು ನಗರದಲ್ಲಿ ಸುಮಾರು 700 ವಾಹನ ಮಾಲಿನ್ಯ ತಪಾಸಣಾ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಸುಮಾರು 120 ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇನ್ನು ಈ ಕೇಂದ್ರಗಳನ್ನು ಉನ್ನತೀಕರಿಸಲು ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ತಿಳಿಸಿದರು.