ಶಿವಮೊಗ್ಗ : ‘ಕುಗ್ರಾಮದಲ್ಲಿದ್ದರೂ, ನಮ್ಮದೊಂದು ಮಾದರಿ ಶಾಲೆ. ರಾಜ್ಯದ ಎಲ್ಲೆಡೆ ಇದನ್ನು ಅಳವಡಿಸಬೇಕು. ಈ ಕಾರಣಕ್ಕೆ ನೀವು ಇಲ್ಲಿಗೆ ಬಂದು ವಾಸ್ತವ್ಯ ಮಾಡಬೇಕು’ ಹೀಗೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿ ಗುಡ್ಡೇಕೇರಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆಶ್ವೀಜಾ. ಈ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ, ತಾವು ಅಲ್ಲಿಗೆ ಬಂದು ವಾಸ್ತವ್ಯ ಮಾಡುವುದಾಗಿ ಬಾಲಕಿಗೆ ಭರವಸೆ ನೀಡಿದ್ದಾರೆ.

ಮಲೆನಾಡಿನಲ್ಲಿ ಮಳೆಗಾಲದಲ್ಲಿ ಸೇತುವೆ ಇಲ್ಲದೆ ಸಂಕದ ಮೇಲೆ ಸಂಚರಿಸುವ ಅನಿವಾರ್ಯತೆಯಲ್ಲಿ ಉಂಟಾದ ಪ್ರಾಣಹಾನಿಯ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ವಿದ್ಯಾರ್ಥಿಗಳು, ಪೋಷಕರ ಜೊತೆಗೆ ಮಂಗಳವಾರ ನಡೆಸಿದ ವೀಡಿಯೋ ಕಾನ್‌್ಫರೆನ್ಸ್‌ನಲ್ಲಿ ತೀರ್ಥಹಳ್ಳಿ ತಾಲೂಕು ತಹಸೀಲ್ದಾರ್‌ ಆನಂದಪ್ಪ ನಾಯ್‌್ಕ ಜೊತೆಗೆ ಹೊಸೂರಿನ ಶಾಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಆಶ್ವೀಜಾ ಈ ರೀತಿಯ ಮನವಿ ಮಾಡಿದರು.

ತಮ್ಮ ಶಾಲೆಯಲ್ಲಿ ಡಿಜಿಟಲ್‌ ಕ್ಲಾಸ್‌ರೂಂ, ಅತ್ಯುತ್ತಮ ಲೈಬ್ರರಿ ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ ಹೈಟೆಕ್‌ ವ್ಯವಸ್ಥೆ ಇದೆ. ನಮ್ಮದೊಂದು ಮಾದರಿ ಶಾಲೆ. ಇದೇ ರೀತಿ ರಾಜ್ಯದ ಇತರೆ ಸರ್ಕಾರಿ ಶಾಲೆಗಳಲ್ಲಿಯೂ ಇರಬೇಕು. ಈ ಕಾರಣಕ್ಕೆ ತಾವು ಇಲ್ಲಿಗೆ ಬಂದು ವಾಸ್ತವ್ಯ ಮಾಡಬೇಕು ಎಂದು ಆಶ್ವೀಜಾ ಕೋರಿದರು.

ಈ ವೀಡಿಯೋ ಕಾನ್‌್ಫರೆನ್ಸ್‌ನಲ್ಲಿ ವಿದ್ಯಾರ್ಥಿಗಳಾದ ಸಹನಾಭಟ್‌, ಮನುಶ್ರೀ, ಹರ್ಷಿತಾ ಕುಂದಾದ್ರಿ, ಕಳೆದ ವರ್ಷ ಕಾಲು ಸಂಕದಿಂದ ಜಾರಿ ನೀರಿಗೆ ಬಿದ್ದು ಮೃತಪಟ್ಟಆಶಿಕಾ ತಾಯಿ, ಚಿಕ್ಕಪ್ಪ ರಮೇಶ್‌ ಕೂಡ ಭಾಗಿಯಾಗಿದ್ದರು.

ಕಳೆದ ವರ್ಷ ನಡೆದ ಕಾಲು ಸಂಕ ದುರಂತದ ಬಳಿಕ ಶಾಲಾ ಸಂಪರ್ಕ ಸೇತು ಯೋಜನೆ ಜಾರಿಗೊಳಿಸಿದ್ದರು. ಇದರ ಅನುಷ್ಠಾನ ಕುರಿತು ಮುಖ್ಯಮಂತ್ರಿಗಳು ನಡೆಸಿದ ವೀಡಿಯೋ ಕಾನ್‌್ಪರೆನ್ಸ್‌ನಲ್ಲಿ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಈ ವಿದ್ಯಾರ್ಥಿಗಳು ಭಾಗಿಯಾಗಿದ್ದರು.