ನೀವು ಎಟಿಎಂ ಕಾರ್ಡ್ ಬಳಕೆದಾರರೇ ಹಾಗಾದ್ರೆ. ನಿಮ್ಮ ಬಳಿ ಇರುವ ಕಾರ್ಡ್ ಯಾವ ರೀತಿಯದ್ದು ಎಂದು ಒಮ್ಮೆ ಗಮನಿಸಿಕೊಳ್ಳಿ. ಒಂದು ವೇಳೆ ನೀವು ಚಿಪ್ ಇಲ್ಲದ ಎಟಿಎಂ ಬಳಕೆ ಮಾಡುತ್ತಿದ್ದರೆ ಅದು ಜನವರಿ 2019 ನಂತರದಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. 

ನವದೆಹಲಿ: 2019 ರ ಜನವರಿಯಿಂದ ಕೆಲವು ಹಳೆಯ ಮಾದರಿಯ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳು ಕಾರ್ಯನಿರ್ವಹಿಸುದಿಲ್ಲ. ಇಂತಹ ಕಾರ್ಡ್‌ಗಳನ್ನು ಇಎಂವಿ ಚಿಪ್ ಹಾಗೂ ಪಿಐಎನ್ ಆಧಾರಿತ ಕಾರ್ಡ್‌ಗಳಿಗೆ ಬದಲಾಯಿಸಿಕೊಳ್ಳಬೇಕಿದೆ. 

ಹೊಸ ಕಾರ್ಡ್‌ಗಳು ಹೆಚ್ಚಿನ ಭದ್ರತೆಯನ್ನು ಹೊಂದಿದ್ದು, ವಂಚನೆಗೆ ಒಳಗಾಗುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಹಳೆಯ ಮಾದರಿ ಕಾರ್ಡು ಗಳನ್ನು ಮರಳಿಸಿ ಹೊಸ ಕಾರ್ಡುಗಳಿಗೆ ಬದಲಿಸಿ ಕೊಳ್ಳುವಂತೆ ರಿಸರ್ವ್ ಬ್ಯಾಂಕ್ ಸೂಚಿಸಿದೆ. ರಿಸರ್ವ್ ಬ್ಯಾಂಕ್ 2015 ರ ಆಗಸ್ಟ್ 27 ರಂದೇ ನಿರ್ದೇಶನ ಹೊರಡಿಸಿ ಬ್ಯಾಂಕುಗಳಿಗೆ ಹೊಸ ಕಾರ್ಡ್ ಗಳ ವಿತರಣೆಗೆ ಮೂರು ವರ್ಷಗಳ ಕಾಲಾವಕಾಶ ನೀಡಿತ್ತು.

2015 ರ ಸೆ.1 ರ ಬಳಿಕ ವಿತರಿಸಲಾದ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳಲ್ಲಿ ಇಎಂವಿ ಚಿಪ್ ಹಾಗೂ ಪಿಐಎನ್ ಆಧಾರಿತ ತಂತ್ರಜ್ಞಾನವಿದೆ.

ಏನಿದು ಇಎಂವಿ?: ಇಎಂವಿ ಅಂದರೆ ಯುರೋ ಪೇ, ಮಾಸ್ಟರ್ ಕಾರ್ಡ್ ಮತ್ತು ವಿಸಾದ ಸಂಕ್ಷಿಪ್ತರೂಪವಾಗಿದ್ದು, ಈ ಮಾದರಿಯ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳಲ್ಲಿ ಸಣ್ಣದೊಂದು ಬಂಗಾರದ ಬಣ್ಣದ ಚಿಪ್ ಅಳವಡಿಸಿರಲಾಗುತ್ತದೆ. ಇದು ಮೋಸದ ವ್ಯವಹಾರಗಳನ್ನು ತಡೆಗಟ್ಟಲಿದೆ.