Asianet Suvarna News Asianet Suvarna News

ಪ್ರಳಯವಾದ್ರೂ ಅತೃಪ್ತರ ಸೇರಿಸಿಕೊಳ್ಳಲ್ಲ: ಸಿದ್ದರಾಮಯ್ಯ

ಪ್ರಳಯವಾದ್ರೂ ಅತೃಪ್ತರ ಸೇರಿಸಿಕೊಳ್ಳಲ್ಲ: ಸಿದ್ದು| ಯಡಿಯೂರಪ್ಪ ಅವರೇ, ನೀವು ಇನ್ನು 1 ವರ್ಷವೂ ಸರ್ಕಾರ ನಡೆಸುವುದಿಲ್ಲ ನೋಡುತ್ತಿರಿ!| ಶಾಸಕರ ರಾಜೀನಾಮೆಗೆ ಬಿಜೆಪಿ ಕಾರಣ ಎಂದು ಜನಕ್ಕೆ ಗೊತ್ತಿದೆ, ನೀವೇಕೆ ಒಪ್ಪಿಕೊಳ್ಳುತ್ತಿಲ್ಲ?| ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ

There Is No Place For Rebel MLAs In Congress Says Siddaramaiah
Author
Bangalore, First Published Jul 24, 2019, 7:46 AM IST

ವಿಧಾನಸಭೆ[ಜು.24]: ‘ಪ್ರಳಯವಾದರೂ ಅತೃಪ್ತ ಶಾಸಕರನ್ನು ಮತ್ತೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದಿಲ್ಲ.’

ಹೀಗಂತ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ಮಂಗಳವಾರ ಘೋಷಿಸಿದರು. ಅಷ್ಟೇ ಅಲ್ಲ, ವಾಮ ಮಾರ್ಗದಿಂದ ಅಧಿಕಾರಕ್ಕೆ ಬರುತ್ತಿರುವ ಯಡಿಯೂರಪ್ಪ ಅವರೇ ನೀವು ಮುಂದಿನ ಆರು ತಿಂಗಳು, ಒಂದು ವರ್ಷವೂ ಸರ್ಕಾರ ನಡೆಸಲು ಆಗುವುದಿಲ್ಲ ನೋಡುತ್ತಿರಿ ಎಂಬ ಎಚ್ಚರಿಕೆಯನ್ನು ನೀಡಿದರು.

ವಿಧಾನಸಭೆಯಲ್ಲಿ ಮಂಗಳವಾರ ವಿಸ್ವಾಸ ಮತ ಯಾಚನೆ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್‌ಗೆ ಕೈಕೊಟ್ಟಅತೃಪ್ತರನ್ನು ಪ್ರಳಯವಾದರೂ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅತೃಪ್ತರು ರಾಜಕೀಯ ಸಮಾಧಿಯಾಗುತ್ತಾರೆ. ಈ ಹಿಂದೆ ಆಪರೇಷನ್‌ ಕಮಲಕ್ಕೆ ಒಳಗಾಗಿದ್ದವರಲ್ಲಿ ಮೂರ್ನಾಲ್ಕು ಜನ ಮಾತ್ರ ಮರು ಆಯ್ಕೆಯಾದರು. ಉಳಿದವರೆಲ್ಲ ಸೋತರು. ಈಗಲೂ ಬಿಜೆಪಿ ಜೊತೆ ಹೋಗಿರುವರಿಗೂ ಅದೇ ಗತಿ ಬರಲಿದೆ ಎಂದರು.

ಬಿಜೆಪಿಯವರು ಶಾಸಕರ ಕುದುರೆ ವ್ಯಾಪಾರದ ಮೂಲಕ ಅಧಿಕಾರಕ್ಕೆ ಬರುತ್ತಿರುವುದರಿಂದ ಹೆಚ್ಚುದಿನ ನಿಮ್ಮ (ಬಿಜೆಪಿ) ಸರ್ಕಾರವೂ ನಡೆಯಲ್ಲ. ಈ ರೀತಿ ಅಧಿಕಾರಕ್ಕೆ ಬಂದ ಸರ್ಕಾರಗಳು ಹೆಚ್ಚು ದಿನ ಉಳಿದದ್ದು ದೇಶದಲ್ಲಿ ಬಹಳ ಅಪರೂಪ. ಯಡಿಯೂರಪ್ಪನವರೇ ಈ ರೀತಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದು ನೀವು 6 ತಿಂಗಳು ಅಥವಾ ಒಂದು ವರ್ಷವೂ ಸರ್ಕಾರ ಮಾಡಲು ಆಗಲ್ಲ. ನಿಮ್ಮ ಪಕ್ಷದವರು, ಪಕ್ಷೇತರರು ಎಲ್ಲಾ ಸೇರಿ ಹಿಂದೆ ನಿಮ್ಮನ್ನ 5 ವರ್ಷ ಮುಖ್ಯಮಂತ್ರಿಯಾಗಿರಲು ಬಿಟ್ರಾ? ಈಗಲೂ ಅದೇ ಆಗೋದು. ವಾಮ ಮಾರ್ಗದಿಂದ ಅಧಿಕಾರಕ್ಕೆ ಬರುತ್ತಿರುವ ನಿಮಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?

ಬಿಜೆಪಿಯವರು, ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗಲ್ಲ ಅಂದುಕೊಂಡಿದ್ದಾರೆ. ನಮ್ಮ ಶಾಸಕರ ರಾಜೀನಾಮೆಗೆ ಬಿಜೆಪಿಯವರು ನಡೆಸಿರುವ ಕುದುರೆ ವ್ಯಾಪಾರವೇ ಕಾರಣ ಎಂದು ರಾಜ್ಯದ ಶೇ.99ರಷ್ಟುಜನರಿಗೆ ಗೊತ್ತಿದೆ. ಆದರೂ, ಬಿಜೆಪಿಯವರು ನಮಗೂ ಇದಕ್ಕೂ ಸಂಬಂಧ ಇಲ್ಲ ಎನ್ನುತ್ತಿರುವುದೇಕೆ? ನಿಜವನ್ನು ನೇರವಾಗಿ ಒಪ್ಪಿಕೊಂಡುಬಿಡಿ, ಅಧಿಕಾರಕ್ಕಾಗಿ ಆಪರೇಷನ್‌ ಕಮಲ ಮಾಡಿದ್ದೇವೆ ಅಂತ ಜನರ ಮುಂದೆ ಹೇಳಿ ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಕಟುಕಿದರು.

ಪಕ್ಷಾಂತರ ರೋಗದಿಂದ ಯಾವ ಸರ್ಕಾರವೂ ಉಳಿಯಲ್ಲ:

1983ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದರೂ ಇಂದಿಗೂ ಪಕ್ಷಾಂತರ ನಿಂತಿಲ್ಲ. ಬೇರೆ ಬೇರೆ ಮಾರ್ಗಗಳನ್ನು ಹುಡುಕಿ ಪಕ್ಷಾಂತರ ನಡೆಯುತ್ತಲೇ ಇದೆ. ಈ ಪಕ್ಷಾಂತರ ರೋಗ ಹೀಗೇ ಬೆಳೆಯಲು ಬಿಟ್ಟರೆ ಪ್ರಜಾಪ್ರಭುತ್ವದಲ್ಲಿ ಯಾವ ಸರ್ಕಾರವೂ ಉಳಿಯುವುದಿಲ್ಲ ಎಂದು ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆ ತಂದ ಮೇಲೂ ಕ್ರಮಬದ್ಧವಾಗಿ ರಾಜೀನಾಮೆ ನೀಡಿದರೆ ಸಾಕು ಹಿಂದೂ ಮುಂದೂ ನೋಡದೆ ಅದನ್ನು ಸ್ಪೀಕರ್‌ ಅಂಗೀಕರಿಸಬೇಕಾಗಿತ್ತು. ಇದರಿಂದಲೂ ಪಕ್ಷಾಂತರ ಮತ್ತೆ ಮುಂದುವರೆದಂತಾಗಿತ್ತು. ಅದನ್ನು ತಡೆಯಲು ಮತ್ತೆ ಸಂವಿಧಾನಕ್ಕೆ ತಿದ್ದುಪಡಿ ತಂದು ಶಾಸಕರು ರಾಜೀನಾಮೆ ನೀಡಿದ ಮಾತ್ರಕ್ಕೆ ಅಂಗೀಕರಿಸಬೇಕೆಂದಿಲ್ಲ, ರಾಜೀನಾಮೆಯನ್ನು ಸ್ವ ಇಚ್ಛೆಯಿಂದ ಹಾಗೂ ನೈಜತೆಯಿಂದ ಕೂಡಿದ ಕಾರಣಗಳನ್ನು ನೀಡಿ ನೀಡಲಾಗಿದೆಯಾ ಎಂದು ಪರಿಶೀಲಿಸುವ ಅಧಿಕಾರವನ್ನು ಸ್ಪೀಕರ್‌ ಅವರಿಗೆ ನೀಡಲಾಯಿತು. ಇಷ್ಟಾದರೂ ಬೇರೆ ಬೇರೆ ಮಾರ್ಗಗಳ ಮೂಲಕ ಪಕ್ಷಾಂತರ ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮತದಾರರ ಮುಂದೆ ನಾವು ಏನೇನೂ ಅಲ್ಲ:

ನಾವು ಎಷ್ಟೇ ಬುದ್ಧಿವಂತರು ಎಂದುಕೊಳ್ಳಬಹುದು. ಆದರೆ ಮತದಾರರ ಮುಂದೆ ನಾವು ಏನೇನು ಅಲ್ಲ. ನಾನು ಮುಖ್ಯಮಂತ್ರಿ ಆದಾಗ ಎಷ್ಟೆಲ್ಲಾ ಜನಪರ ಕಾರ್ಯಕ್ರಮಗಳನ್ನು ಕೊಟ್ಟರೂ, ನಮ್ಮ ಪಕ್ಷದಿಂದ ನೀಡಿದ್ದ ಬಹುತೇಕ ಎಲ್ಲ ಭರವಸೆಗಳನ್ನು ಈಡೇರಿಸಿದರೂ ನಮಗೆ ಮತ್ತೆ ಬಹುಮತ ನೀಡಲಿಲ್ಲ. ಆದರೆ, ನಮಗೆ ದೊರೆತ ಮತ ಪ್ರಮಾಣದ ಪ್ರಕಾರ ಜನರು ನಮಗೆ ಬಹುಮತ ಕೊಟ್ಟಿದ್ದರು. ಬಿಜೆಪಿಯನ್ನು ತಿರಸ್ಕರಿಸಿದ್ದರು. ನಮ್ಮ ಪಕ್ಷ ಸರ್ಕಾರ ರಚಿಸುವಷ್ಟುಸ್ಥಾನಗಳನ್ನು ಹೊಂದಿಲ್ಲದಿದ್ದರಿಂದ ಜೆಡಿಎಸ್‌ನವರ ಜೊತೆ ಸೇರಿ ಸರ್ಕಾರ ರಚಿಸಿದೆವು. ನಮ್ಮೆರಡು ಪಕ್ಷಗಳ ಒಟ್ಟು ಮತಪ್ರಮಾಣ ಶೇ.54.44ರಷ್ಟಿತ್ತು. ಇದರ ಆಧಾರದಲ್ಲಿಯೇ ನಾವು ಸರ್ಕಾರ ರಚಿಸಿದ್ದೆವು. ಈ ಹಿಂದೆಯೂ ಕರ್ನಾಟಕದಲ್ಲಿ ಹಲವು ಬಾರಿ ಸಮ್ಮಿಶ್ರ ಸರ್ಕಾರ ಸರ್ಕಾರಗಳು ರಚನೆಯಾಗಿ, ಆಡಳಿತ ನಡೆಸಿವೆ. ಇದೇನು ಮೊದಲ ಬಾರಿಗೆ ರಚನೆಯಾಗುತ್ತಿರುವುದಲ್ಲ ಎಂದರು.

ಮುಂಬೈನಲ್ಲಿ ಪಕ್ಷಾಂತರ ಮಾಡಲು ಸೇರಿಕೊಂಡವರಿಗೆ ಅಷ್ಟೊಂದು ಪೊಲೀಸರ ಭದ್ರತೆ ಕೊಟ್ರಲ್ಲ ಪ್ರಜಾಪ್ರಭುತ್ವ ಇನ್ನೂ ಉಳಿದಿದೆಯಾ? ಹಾಗಾದರೆ ಮಹಾರಾಷ್ಟ್ರದಲ್ಲಿ ಯಾವ ಸರ್ಕಾರವಿದೆ? ಹದಿನೈದು ಜನ ಪಕ್ಷಾಂತರಿ ಶಾಸಕರನ್ನು ಕಾಯಲು ಸಾವಿರಾರು ಜನನ್ನು ಬಿಟ್ಟಿದ್ದರಲ್ಲ ಇದು ಪ್ರಜಾಪ್ರಭುತ್ವ ವ್ಯವಸ್ಥೆಯೇ? ನಾವು ನಮ್ಮ ಪಕ್ಷದ ಶಾಸಕರ ಬಳಿಯೇ ಮಾತನಾಡುವಂತಿಲ್ಲ ಎಂದರೆ ಏನರ್ಥ ಎಂದು ಬಿಜೆಪಿಗರನ್ನು ತರಾಟೆಗೆ ತೆಗೆದುಕೊಂಡರು.

Follow Us:
Download App:
  • android
  • ios