ನಾವು ಕುಡಿಯಲು ನೀರು ಕೇಳಿದರೆ, ತಮಿಳುನಾಡಿನವರು ಬೆಳೆಗೆ ನೀರು ಕೇಳುತ್ತಿದ್ದಾರೆ - ಸಿದ್ದರಾಮಯ್ಯ
ಬೆಂಗಳೂರು(ಸೆ.10): ನದಿ ನೀರಿನ ಸಮಸ್ಯೆ ಬಗೆಹರಿಯಲು ಕೇಂದ್ರ ಸರ್ಕಾರ ಶೀಘ್ರವೇ ರಾಷ್ಟ್ರೀಯ ಜಲ ನೀತಿ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ತೆಲಗು ವಿಜ್ನಾನ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಕೃಷ್ಣದೇವರಾಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ದೇಶದಲ್ಲಿ ಕೋರ್ಟ್ ಆದೇಶದಿಂದ ಅಂತಾರಾಜ್ಯ ನದಿ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಕೇವಲ ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು. ಕಾವೇರಿ ನೀರಿನ ಸಮಸ್ಯೆಯನ್ನು ಮನಸ್ಸು ಮಾಡಿದ್ದರೆ ಮಾತುಕತೆಯ ಮೂಲಕವೇ ಬಗೆ ಹರಿಸಿಕೊಳ್ಳಬಹುದಿತ್ತು. ಆದರೆ, ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿದೆ.ಈಗ ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಕಷ್ಟವಾಗುತ್ತಿದೆ.
ಮೆಟ್ಟೂರು ಡ್ಯಾಂನಲ್ಲಿ ಅವರಿಗೆ ಬೇಕಾದಷ್ಟು ನೀರು ಇದೆ. ಆದರೂ ತಮಿಳುನಾಡು ಸುಪ್ರೀಂಕೋರ್ಟ್`ನಲ್ಲಿ ನೀರಿಗೆ ಮನವಿ ಮಾಡಿದೆ. ಸುಪ್ರೀಂಕೋರ್ಟ್ ಆದೇಶವನ್ನು ನಾವು ಭಾರವಾದ ಮನಸ್ಸಿನಿಂದ ಪಾಲಿಸುತ್ತಿದ್ದೇವೆ. ನಾವು ಕುಡಿಯಲು ನೀರು ಕೇಳಿದರೆ, ತಮಿಳುನಾಡಿನವರು ಬೆಳೆಗೆ ನೀರು ಕೇಳುತ್ತಿದ್ದಾರೆ. ಹೀಗಾಗಿ, ಸುಪ್ರೀಂ ಕೋರ್ಟ್ ಆದೇಶ ಪರಿಷ್ಕರಣೆ ಮಾಡುವಂತೆ ಮನವಿ ಮಾಡಲಾಗುವುದು. ಅಲ್ಲದೇ, ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆಯೂ ಪತ್ರ ಬರೆಯಲಾಗಿದೆ ಎಂದು ಸಿಎಂ ಹೇಳಿದರು.
