ಬೆಂಗಳೂರು (ಜು. 18): ದೇಶದಲ್ಲಿ ದೇವರು, ಧರ್ಮದ ಹೆಸರಿನಲ್ಲಿ ಹಿಂಸಾಚಾರ, ಕಗ್ಗೊಲೆ ಮತ್ತು ಬಾಯಿ ಮುಚ್ಚಿಸುವಂತಹ ಕೃತ್ಯಗಳು ನಡೆಯುತ್ತಿವೆ. ಇಂತಹ ವೇಳೆಯಲ್ಲಿ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ 2018 ನೇ ಸಾಲಿನ ಪ್ರಶಸ್ತಿ ಸ್ವೀಕರಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕರಿಸದಿರಲು ನಿರ್ಧರಿಸಿರುವುದಾಗಿ ಹಿರಿಯ ರಂಗ ನಿರ್ದೇಶಕ ಎಸ್‌.ರಘುನಂದನ್‌ ಹೇಳಿದ್ದಾರೆ.

ಪ್ರಸ್ತುತ ದೇಶದ ಹಲವು ಕಡೆ ಮತ ಧರ್ಮದ ಹೆಸರಿನಲ್ಲಿ, ಪೊರೆಯುವ ದೇವರ ಹೆಸರಿನಲ್ಲಿ, ತಿನ್ನುವ ಆಹಾರದ ಹೆಸರಿನಲ್ಲಿ ಗುಂಪು ಹಲ್ಲೆಗಳು, ಕಗ್ಗೊಲೆಗಳು ನಡೆಯುತ್ತಿವೆ. ಅಧಿಕಾರದಲ್ಲಿ ಇರುವವರು ಇಂಥ ಭೀಕರ ಹಿಂಸಾಚಾರ ಮತ್ತು ಕಗ್ಗೊಲೆಗಳಿಗೆ ಕಾರಣವಾದ ದ್ವೇಷವನ್ನು ಅಂತರಜಾಲ ತಂತ್ರಜ್ಞಾನದ ಎಲ್ಲ ಪಟ್ಟುಗಳನ್ನು ಬಳಸಿ ಜನರ ಮನಸ್ಸಿನಲ್ಲಿ ತುಂಬುತ್ತಿದ್ದಾರೆ.

ಭಾರತೀಯತೆಯ ‘ವಸುಧೈವ ಕುಟುಂಬಮ್‌’ ಅನ್ನುವುದರ ಅರ್ಥವನ್ನೇ ತಿರುಚಲಾಗುತ್ತಿದೆ. ಕನ್ಹಯ್ಯಾಕುಮಾರ್‌ ಅಂಥ ಯುವಕರು ಸೇರಿದಂತೆ ದೇಶದ ಅತ್ಯಂತ ಶೋಷಿತರು ಮತ್ತು ದಲಿತ ಜನರ ಪರವಾಗಿ ಕೋರ್ಟ್‌-ಕಚೇರಿಗಳಲ್ಲಿ ವಾದಿಸುತ್ತ, ಅವರ ಅಪಾರ ಕಷ್ಟಗಳನ್ನು ಕುರಿತು ಲೇಖನ ಮತ್ತು ಪುಸ್ತಕಗಳನ್ನು ಬರೆಯುತ್ತ, ಅವರ ಹೋರಾಟವು ಅಹಿಂಸಾ ಮಾರ್ಗದಲ್ಲಿ ನಡೆಯುವಂತೆ ಸಲಹೆ-ಸಹಕಾರ ನೀಡುತ್ತ, ತಮ್ಮದೇ ರೀತಿಯಲ್ಲಿ ಹೋರಾಡುತ್ತ ಬಂದಿರುವ ಹಲವರ ವಿರುದ್ಧ ಯುಎಪಿಎ ಕಾಯಿದೆಯಡಿ ವಿಚಾರಣೆ ನಡೆಯುತ್ತಿದ್ದು, ಅವರಲ್ಲಿ ಹೆಚ್ಚಿನವರು ಜಾಮೀನು ಕೂಡ ಸಿಕ್ಕದೆ ಸೆರೆಮನೆಯಲ್ಲಿದ್ದಾರೆ. ಹೀಗಾಗಿ ನಾನು ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.