ರಾಜ್ಯದ ಋುಣಮುಕ್ತ ವಿಧೇಯಕಕ್ಕೆ ಕೇಂದ್ರ ಸರ್ಕಾರ ಎಂಟು- ಹತ್ತು ದಿನಗಳಲ್ಲಿ ಒಪ್ಪಿಗೆ ಸೂಚಿಸುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

ನವದೆಹಲಿ : ರೈತರ ಸಾಲ ಮನ್ನಾಗೆ ಅವಕಾಶ ಮಾಡಿಕೊಡುವ ರಾಜ್ಯದ ಋುಣಮುಕ್ತ ವಿಧೇಯಕಕ್ಕೆ ಕೇಂದ್ರ ಸರ್ಕಾರ ಎಂಟು- ಹತ್ತು ದಿನಗಳಲ್ಲಿ ಒಪ್ಪಿಗೆ ಸೂಚಿಸುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕೊಡಗಿಗೆ ತಕ್ಷಣವೇ ಹಣಕಾಸು ನೆರವು ನೀಡಬೇಕು ಮತ್ತು ರೈತರ ಸಾಲ ಮನ್ನಾದ ಋುಣಮುಕ್ತ ವಿಧೇಯಕಕ್ಕೆ ಶೀಘ್ರ ರಾಷ್ಟ್ರಪತಿಗಳ ಅಂಕಿತ ಬೀಳುವಂತೆ ಮಾಡಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನೊಳಗೊಂಡ ನಿಯೋಗದಲ್ಲಿ ಭೇಟಿಯಾದ ಬಳಿಕ ಕುಮಾರಸ್ವಾಮಿ ಶುಕ್ರವಾರ ದೆಹಲಿಯಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರದ ಋುಣಮುಕ್ತ ವಿಧೇಯಕ ಕೇಂದ್ರ ಸರ್ಕಾರಕ್ಕೆ ತಲುಪಿದ್ದು, ಗೃಹ ಸಚಿವಾಲಯವು ಹಣಕಾಸು ಇಲಾಖೆಯಿಂದ ಕೇಳಿರುವ ಎರಡು ಸ್ಪಷ್ಟಿಕರಣಗಳನ್ನು ಗುರುವಾರ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಕಳುಹಿಸಿಕೊಡಲಾಗಿದೆ. ಆದ್ದರಿಂದ ಈ ವಿಧೇಯಕಕ್ಕೆ ಶೀಘ್ರವೇ ಒಪ್ಪಿಗೆ ಸೂಚಿಸುವಂತೆ ನಿಯೋಗ ಮನವಿ ಮಾಡಿಕೊಂಡಿದೆ. ಋುಣ ಮುಕ್ತ ವಿಧೇಯಕಕ್ಕೆ ಇನ್ನು 8-10 ದಿನಗಳಲ್ಲಿ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸುವ ಭರವಸೆ ತಮಗಿದೆ ಎಂದರು.

ಈ ಮಧ್ಯೆ, ರಾಜನಾಥ್‌ ಸಿಂಗ್‌ ಭೇಟಿ ಬೆನ್ನಲ್ಲೇ ಜೆಡಿಎಸ್‌ ವರಿಷ್ಠ ದೇವೇಗೌಡ ಅವರು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ರನ್ನು ಭೇಟಿಯಾಗಿ ಋುಣ ಮುಕ್ತ ವಿಧೇಯಕ ವಿಚಾರ ಪ್ರಸ್ತಾಪಿಸಿದರು. ಈ ವಿಧೇಯಕ ತಮ್ಮ ಮುಂದೆ ಬಂದರೆ ತಕ್ಷಣ ಅಂಕಿತ ಹಾಕುವಂತೆ ಮನವಿ ಮಾಡಿದರು. ಕಳೆದ ಬಾರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಈ ವಿಧೇಯಕಕ್ಕೆ ಆದ್ಯತೆ ಮೇರೆಗೆ ಒಪ್ಪಿಗೆ ಸೂಚಿಸುವಂತೆ ಮನವಿ ಮಾಡಿದ್ದರು.

ಸಂಪುಟ ವಿಸ್ತರಣೆ ನಿರ್ಧಾರ ಕಾಂಗ್ರೆಸ್‌ಗೆ ಬಿಟ್ಟ ಜೆಡಿಎಸ್‌

ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ​ ಮಂಡಳಿ ನೇಮಕಾತಿಗೆ ಜೆಡಿಎಸ್‌ ಸಂಪೂರ್ಣ ಸಜ್ಜಾಗಿದೆ. ಆದರೆ, ಕಾಂಗ್ರೆಸ್‌ ಇನ್ನೂ ಮೀನಮೇಷ ಎಣಿಸುತ್ತಿದೆ. ಕಳೆದ ಬಾರಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ನಿಗಮ​-ಮಂಡಳಿ ನೇಮಕ ಮತ್ತು ಸಂಪುಟ ವಿಸ್ತರಣೆ ಆದಷ್ಟುಬೇಗ ನಡೆಸಿದರೆ ಒಳ್ಳೆಯದು ಎಂದು ಕುಮಾರಸ್ವಾಮಿ ಸ್ಪಷ್ಟವಾಗಿಯೇ ಹೇಳಿದ್ದರು. ಆದರೂ ಕಾಂಗ್ರೆಸ್‌ ಪಕ್ಷಕ್ಕೆ ಇನ್ನೂ ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಇದೀಗ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಈ ಬಗ್ಗೆ ತೀರ್ಮಾನಕ್ಕೆ ಬರಲಿ, ಇನ್ನೊಮ್ಮೆ ಕಾಂಗ್ರೆಸ್‌ ಹೈಕಮಾಂಡ್‌ ಜೊತೆ ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿಕೊಳ್ಳುವುದು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಕುಮಾರಸ್ವಾಮಿ ಅವರ ಆಪ್ತ ಮೂಲಗಳು ತಿಳಿಸಿವೆ.

ನೆರೆ ಪರಿಹಾರಕ್ಕೆ ರಾಜ್ಯದ ಮೊರೆ

ರಾಜ್ಯದ ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ .3.45 ಸಾವಿರ ಕೋಟಿ ಹಾನಿಯಾಗಿದೆ ಎಂಬ ಪ್ರಾಥಮಿಕ ವರದಿಯಿದೆ. ರಸ್ತೆಗಳು ತೀರಾ ಹದಗೆಟ್ಟಿದ್ದು, ಈ ಭಾಗದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಸ್ಥಿತಿ ಚಿಂತಾಜನಕವಾಗಿದೆ. ಹಾಳಾಗಿರುವ ರಸ್ತೆ, ಸರ್ಕಾರಿ ಕಚೇರಿ ಮುಂತಾದವುಗಳ ರಿಪೇರಿ, ಮರು ನಿರ್ಮಾಣಕ್ಕೆ ಅಂದಾಜು .1,329.88 ಕೋಟಿ ಬೇಕಾಗಬಹುದು. ಆದ್ದರಿಂದ ಕೇಂದ್ರ ಸರ್ಕಾರ ರಾಜ್ಯದ ಬೇಡಿಕೆಗೆ ಸ್ಪಂದಿಸಿ ಸೂಕ್ತ ಅನುದಾನ ನೀಡಬೇಕು ಎಂದು ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರ ನಿಯೋಗ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿ ಮನವಿ ಮಾಡಿದೆ.

ಗೃಹ ಸಚಿವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ರಷ್ಯಾದ ಅಧ್ಯಕ್ಷರ ಪುಟಿನ್‌ ಭೇಟಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಪ್ರಧಾನಿ ಅವರೇ ಗೃಹ ಸಚಿವರ ಭೇಟಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಗೃಹ ಸಚಿವರ ಭೇಟಿಯಾಗಿ ಪ್ರಕೃತಿ ವಿಕೋಪಕ್ಕೆ ಪರಿಹಾರ ನೀಡುವಂತೆ ಮನವಿ ಮಾಡಿರುವುದಾಗಿ ಹೇಳಿದರು.