ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಉಡುಪಿಯ ಶ್ರೀ ಕೃಷ್ಣಮಠ ಹಾಗೂ ಕೊಲ್ಲೂರು ಮುಕಾಂಭಿಕಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಅಲ್ದೇ ಖಾಸಗಿ ಸಹಭಾಗಿತ್ವದ ಸರ್ಕಾರಿ ಆಸ್ಪತ್ರೆಗೆ ಶಿಲಾನ್ಯಾಸ ಕೂಡಾ ನೆರವೇರಿಸಲಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಉಡುಪಿ ಮಠದ ಕಾರ್ಯಕ್ರಮಕ್ಕೆ ಗೈರಾಗಲಿದ್ದು, ಎಂದಿನಂತೆ ಮಠದ ಮೇಲಿನ ತಮ್ಮ ಮುನಿಸು ಮುಂದುವರೆಸಿದ್ದಾರೆ.

ಉಡುಪಿ(ಜೂ.18): ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಉಡುಪಿಯ ಶ್ರೀ ಕೃಷ್ಣಮಠ ಹಾಗೂ ಕೊಲ್ಲೂರು ಮುಕಾಂಭಿಕಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಅಲ್ದೇ ಖಾಸಗಿ ಸಹಭಾಗಿತ್ವದ ಸರ್ಕಾರಿ ಆಸ್ಪತ್ರೆಗೆ ಶಿಲಾನ್ಯಾಸ ಕೂಡಾ ನೆರವೇರಿಸಲಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಉಡುಪಿ ಮಠದ ಕಾರ್ಯಕ್ರಮಕ್ಕೆ ಗೈರಾಗಲಿದ್ದು, ಎಂದಿನಂತೆ ಮಠದ ಮೇಲಿನ ತಮ್ಮ ಮುನಿಸು ಮುಂದುವರೆಸಿದ್ದಾರೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಉಡುಪಿಗೆ ಭೇಟಿ ನೀಡುತ್ತಿದ್ದು, ಶ್ರೀ ಕೃಷ್ಣಮಠ ಹಾಗೂ ಕೊಲ್ಲೂರು ಮುಕಾಂಭಿಕಾ ಕ್ಷೇತ್ರದರ್ಶನ ಅವರ ಪ್ರವಾಸದ ಮುಖ್ಯ ಉದ್ದೇಶ. ಇನ್ನು ಉಡುಪಿ ನಗರದಲ್ಲಿ ದುಬೈನ ಉದ್ಯಮಿ ಬಿ.ಆರ್.ಶೆಟ್ಟಿ ಸಹಭಾಗಿತ್ವದ ಸರ್ಕಾರಿ ಆಸ್ಪತ್ರೆಗೆ ಶಿಲಾನ್ಯಾಸ ಮಾಡುವ ಕಾರ್ಯಕ್ರಮವಿದ್ದು, ಈ ಕುರಿತು ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ಎತ್ತಿದ್ದಾರೆ. ಕರ್ನಾಟಕ ಸರ್ಕಾರ ರಾಜ್ಯನೀತಿಯನ್ನು ಪಾಲನೆ ಮಾಡದೆ ಖಾಸಗಿಯವರೊಂದಿಗೆ ಕಾನೂನು ಬಾಹಿರ ಒಪ್ಪಂದ ಮಾಡಿಕೊಂಡಿದೆ. ಉಡುಪಿಯ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರ ಬಳಿ ಸಾರ್ವಜನಿಕ ಹಿತಾಸಕ್ತಿ ದಾವೆ ವಿಚಾರಣಾ ಹಂತದಲ್ಲಿದೆ. ವಿವಾದಾಸ್ಪದ ಯೋಜನೆಯ ಶಂಕುಸ್ಥಾಪನೆಯನ್ನು ರಾಷ್ಟ್ರಪತಿಗಳ ಮೂಲಕ ಮಾಡಿಸಿ, ನ್ಯಾಯಾಲಯದ ಮೇಲೆ ಪ್ರಭಾವ ಭೀರಲಾಗುತ್ತಿದೆ ಎಂದು ಹೋರಾಟಗಾರರು ದೂರಿದ್ದಾರೆ.

ಇದನ್ನು ಹೊರತುಪಡಿಸಿದರೆ ಇನ್ನೊಂದು ಕಾರಣಕ್ಕೆ ಈ ಬೇಟಿ ಗಮನ ಸೆಳೆದಿದೆ. ರಾಷ್ಟ್ರಪತಿಗಳ ಜೊತೆ ಸಿಎಂ ಕೂಡಾ ಕೃಷ್ಣಮಠಕ್ಕೆ ಬೇಟಿ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೃಷ್ಣಮಠಕ್ಕೆ ಎಂದೂ ಕಾಲಿಡದ ಸಿದ್ದರಾಮಯ್ಯ ಈ ಬಾರಿಯೂ ಕೃಷ್ಣಮಠ ಭೇಟಿ ತಪ್ಪಿಸಿಕೊಂಡಿದ್ದಾರೆ. ಒಂದುವರೆ ದಶಕದ ಹಿಂದೆ ನಡೆದ ಕನಕಗೋಪುರ ವಿವಾದದ ನಂತರ ಕೃಷ್ಣ ಮಠ ಮತ್ತು ಸಿದ್ದರಾಮಯ್ಯನವರ ನಡುವೆ ಅಂತರ ಏರ್ಪಟ್ಟಿದೆ. ಹಲವು ಬಾರಿ ಆಹ್ವಾನವಿದ್ದರೂ ಮಠಕ್ಕೆ ಬಂದಿಲ್ಲ ಅನ್ನೋದು ಗಮನಾರ್ಹ ವಿಚಾರ.

ಇತ್ತ ರಾಷ್ಟ್ರಪತಿಗಳ ಪ್ರವಾಸಕ್ಕೆ ಉಡುಪಿ ಜಿಲ್ಲೆಯಾದ್ಯಂತ ವಿಶೇಷ ಬಂದೋಬಸ್ತ್ ಮಾಡಲಾಗಿದೆ. 1200ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದ್ದು, ರಥಬೀದಿಯಲ್ಲಿ ನಿನ್ನೆಯಿಂದಲೇ ಅಂಗಡಿ ಮುಂಗಟ್ಟು ಮುಚ್ಚಲಾಗಿದೆ. ರಾಷ್ಟ್ರಪತಿಗಳ ವಾಸ್ತವ್ಯಕ್ಕೆ 35 ಲಕ್ಷ ವೆಚ್ಚದಲ್ಲಿ ಪ್ರವಾಸಿ ಬಂಗಲೆಯನ್ನು ನವೀಕರಿಸಲಾಗಿದೆ. ಇನ್ನು ಕೃಷ್ಣಮಠ ಹಾಗೂ ಕೊಲ್ಲೂರು ಕ್ಷೇತ್ರದಲ್ಲಿ ಭಾನುವಾರ ಪ್ರವಾಸಿಗಳ ಸಂದರ್ಶನ ನಿರ್ಬಂಧಿಸಲಾಗಿದೆ.

ಒಟ್ನಲ್ಲಿ ರಾಷ್ಟ್ರಪತಿಗಳ ಇಂದಿನ ಉಡುಪಿ ಭೇಟಿಗೆ ಸಕಲ ಸಿದ್ಧತೆ ಏರ್ಪಟ್ಟಿದ್ದರೆ, ಇತ್ತ ಎಂದಿನಂತೆ ಸಿಎಂ ಸಿದ್ಧರಾಮಯ್ಯ ಕೃಷ್ಣ ಮಠದ ಮೇಲಿನ ಮುನಿಸು ಮುಂದುವರೆಸಿದ್ದಾರೆ.