ಬೆಂಗಳೂರು(ಸೆ.16): ಇಂದು ನಡೆಯುತ್ತಿರುವ ತಮಿಳುನಾಡು ಬಂದ್ ಹಿಂದೆ ರಾಜಕೀಯ ಮೇಲಾಟವಿದೆ. ರಾಜ್ಯದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದು ಬೇಡ ಎಂದು ಕಾಂಗ್ರೆಸ್, ಬಿಜೆಪಿ ಒತ್ತಡ ಹೇರುತ್ತಿವೆ. ಆದರೆ, ತಮಿಳುನಾಡಿನಲ್ಲಿ ಕಾವೇರಿ ನೀರಿಗಾಗಿ ಕಾಂಗ್ರೆಸ್ ಬಿಜೆಪಿ ತೊಡೆ ತಟ್ಟಿ ನಿಂತಿವೆ. ತಮಿಳುನಾಡು ಬಂದ್ ಗೆ ಬೆಂಬಲ ಸೂಚಿಸಿವೆ.
ಇವತ್ತು ಇಡೀ ತಮಿಳುನಾಡು ಬಹುತೇಕ ಸ್ತಬ್ಧವಾಗಲಿದೆ. ಯಾಕೆಂದರೆ ಕಾವೇರಿ ನೀರು ಹಾಗೂ ಕರ್ನಾಟಕದ ಧೋರಣೆ ಖಂಡಿಸಿ ಕಾವೇರಿ ಕೊಳ್ಳದ ವಿವಿಧ ಸಂಘಟನೆಗಳು ಬಂದ್ಗೆ ಕರೆ ಕೊಟ್ಟಿವೆ. ಇಲ್ಲಿ ವಿಶೇಷ ಅಂದ್ರೆ ತಮಿಳುನಾಡಿನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಬೆಂಬಲ ಕೊಟ್ಟಿವೆ. ಪುದುಚೇರಿಯಲ್ಲೂ ಬಿಜೆಪಿ ಬೆಂಬಲ ಘೋಷಿಸಿದೆ.
ವಿಪರ್ಯಾಸ ಅಂದರೆ ನಮ್ಮ ರಾಜ್ಯದಲ್ಲಿ ಆಡಳಿತದಲ್ಲಿರೋದು ಕಾಂಗ್ರೆಸ್ ಪಕ್ಷ, ಸಿಎಂ ಸಿದ್ದರಾಮಯ್ಯನವರು ಕಾವೇರಿ ನೀರು ಬಿಡೋದಕ್ಕೆ ಸಾಧ್ಯವೇ ಇಲ್ಲ ಅಂತಿದ್ದಾರೆ. ಆದರೆ ತಮಿಳುನಾಡಿನಲ್ಲಿ ಇದೇ ಕಾಂಗ್ರೆಸ್ ಪಕ್ಷ ನೀರು ಬೇಕು ಅಂತಾ ಬಂದ್ಗೆ ಕರೆ ಕೊಟ್ಟಿರೋ ತಮಿಳು ಸಂಘಟನೆಗಳ ಪರ ನಿಂತಿದೆ.
ಈ ವಿಷಯವೀಗ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕ ಜನ ನೀರು ಬಿಡಬೇಡಿ ಅಂತಾ ಕಾಂಗ್ರೆಸ್ ಸರ್ಕಾರವನ್ನು ಕೇಳ್ತಿದ್ರೆ ಇದೇ ಕಾಂಗ್ರೆಸ್ ಪಕ್ಷ ಕಾವೇರಿ ನೀರು ಬೇಕೋ ಅನ್ನೋ ತಮಿಳರ ಬೇಡಿಕೆಗೆ ಬೆನ್ನೆಲುಬಾಗಿ ನಿಂತಿದೆ.
ಇನ್ನೊಂದೆಡೆ ಪ್ರಧಾನಿ ಮಧ್ಯಪ್ರವೇಶ ಸಾಧ್ಯವಿಲ್ಲ. ರಾಜ್ಯ ಆಗಿರೋ ಅನ್ಯಾಯ ಸರಿಪಡಿಸಿ ಅಂತಾ ಕರ್ನಾಟಕ ಸರ್ಕಾರವನ್ನು ಒತ್ತಾಯಿಸ್ತಿರೋ ಬಿಜೆಪಿ, ಕರ್ನಾಟಕ ಬಂದ್ಗೆ ಬಹಿರಂಗವಾಗಿ ಬೆಂಬಲ ಘೋಷಿಸಲೇ ಇಲ್ಲ. ಆದರೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಕಾವೇರಿ ನೀರು ಬೇಕು ಅನ್ನೋ ಜನರಿಗೆ ಸಾಥ್ ಕೊಟ್ಟಿದೆ.
ನಮ್ಮ ಬಿಜೆಪಿ ನಾಯಕರು ಕನ್ನಡಿಗರ ನೆರವಿಗೆ ಬರಲಿಲ್ಲ. ಆದರೆ ಅಲ್ಲಿ ಜನರ ಬೆಂಬಲಕ್ಕೆ ನಿಂತಿದೆ. ಈ ಮೂಲಕ ರಾಜಕೀಯ ಲೆಕ್ಕಚಾರಗಳಲ್ಲಿ ಮುಳುಗಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
