ರೈಲು ದುರಂತದಲ್ಲಿ ಸಾವನ್ನಪ್ಪಿದ ಮಾಲೀಕ| ತುತ್ತು ಕೊಟ್ಟ ಮಾಲೀಕನನ್ನು ಹೇಗೆ ಬಿಡಲಿ?| ವೈರಲ್ ಆಯ್ತು ಮೂಕ ಪ್ರಾಣಿಯ ಪ್ರಾಮಾಣಿಕತೆಯ ಈ ವಿಡಿಯೋ
ಮೆಕ್ಸಿಕೋ[ಏ.08]: ಮನಕಲುಕುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಾಕು ನಾಯಿಯೊಂದು ರೈಲು ಅಪಘಾತದಲ್ಲಿ ಕೊನೆಯುಸಿರೆಳೆದ ತನ್ನ ಮಾಲೀಕಕ ಮೃತ ದೇಹದ ಬಳಿ ಕುಳಿತಿರುವ ದೃಶ್ಯ ನೋಡಬಹುದು.
ಲಭ್ಯವಾದ ಮಾಹಿತಿ ಅನ್ವಯ 57ರ ಹರೆಯದ ಮಾಲೀಕ ವಿಕ್ಟರ್ ರೆಯ್ನಾ ವಜ್ಕ್ವಜ್ ರೈಲು ಹಳಿಯ ಬಳಿ ಕುಳಿತು ಮದ್ಯ ಸೇವಿಸುತ್ತಿದ್ದ. ಇದೇ ಸಂದರ್ಭದಲ್ಲಿ ಬಂದ ರೈಲು ಆತನಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿದೆ. ಈ ಘಟನೆಯಲ್ಲಿ ವಿಕ್ಟರ್ ಸಾವನ್ನಪ್ಪಿದ್ದಾನೆ. ಆದರೆ ಆತ ಸಾಕಿದ್ದ ಆ ಮೂಕ ಪ್ರಾಣಿ ಮಾತ್ರ ವಿಕ್ಟರ್ ಮೃತದೇಹ ಬಿಟ್ಟು ಕದಲಲಿಲ್ಲ. ಬಹಳಷ್ಟು ಹೊತ್ತು ಆ ನಾಯಿ ಅಲ್ಲೇ ಕುಳಿತಿತ್ತು.
yari_trevino ಹೆಸರಿನ ಟ್ವಿಟರ್ ಖಾತೆಯಿಂದ ಈ ಮನಕಲುಕುವ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಇನ್ನು ಮೃತದೇಹ ಸಾಗಿಸಲು ಬಂದ ಸಿಬ್ಬಂದಿಗಳು ಒತ್ತಾಯಪೂರ್ವಕವಾಗಿ ನಾಯಿಯನ್ನು ಅಲ್ಲಿಂದ ಓಡಿಸಲು ಯತ್ನಿಸಿದಾಗ, ಅದು ಪೊಲೀಸರನ್ನು ಕಚ್ಚಲು ಮುಂದಾಗಿತ್ತೆನ್ನಲಾಗಿದೆ.
ಈ ಘಟನೆ ಈಶಾನ್ಯ ಮೆಕ್ಸಿಕೋದ ಮೋಟೆಮೊರೊಲೇಸ್ ನಲ್ಲಿ ನಡೆದಿದೆ. ಸ್ಥಳೀಯರು ನೀಡಿರುವ ಮಾಹಿತಿ ಅನ್ವಯ ಮೃತ ವ್ಯಕ್ತಿ ಓರ್ವ ಕುಡುಕನಾಗಿದ್ದ. ಆದರೆ ಈ ನಾಯಿ ಯಾವತ್ತೂ ಆತನನ್ನು ಬಿಟ್ಟು ಇರುತ್ತಿರಲಿಲ್ಲ. ಸದ್ಯ ಆ ನಾಯಿ ಎಲ್ಲಿದೆ? ಅಲ್ಲಿಂದ ಯಾವ ಸ್ಥಳಕ್ಕೆ ರವಾನಿಸಲಾಗಿದೆ ಎಂಬುವುದು ತಿಳಿದು ಬಂದಿಲ್ಲ. ಈ ವಿಡಿಯೋಗೆ ಬಹಳಷ್ಟು ಕಮೆಂಟ್ಗಳು ಬಂದಿವೆ. ಓರ್ವ ವ್ಯಕ್ತಿ ಟ್ವೀಟ್ ಮಾಡುತ್ತಾ 'ನಾವು ಪ್ರಾಣಿಗಳ ಬಗ್ಗೆ ಹಲವಾಋಉ ವಿಚಾರಗಳನ್ನು ಕೇಳಿದ್ದೇವೆ ಆದರೆ ಈ ಘಃಟನೆ ಕಂಡು ಮೂಕ ವಿಸ್ಮಿತನಾಗಿದ್ದೇನೆ' ಎಂದಿದ್ದಾರೆ.
