ನವದೆಹಲಿ(ಆ.05): ರಾಜ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಹೊರಬಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈಯಲ್ಲಿದ್ದ ವಿಶೇಷ ಪೇಪರ್ ಇಡೀ ದೇಶದ ಗಮನ ಸೆಳೆದಿದೆ.

ರಾಜ್ಯಸಭೆಯ ಕಲಾಪದ ಬಳಿಕ ಹೊರಬಂದ ಅಮಿತ್ ಶಾ ಕೈಯಲ್ಲಿದ್ದ ವಿಶೇಷ ಪೇಪರ್‌ವೊಂದು ಎಲ್ಲರ ಗಮನ ಸೆಳೆಯಿತು. ಪೇಪರ್‌ನಲ್ಲಿ ಶಾ ತಮ್ಮ ಇಂದಿನ ದಿನಚರಿಯನ್ನು ಬರೆದುಕೊಂಡಂತೆ ಕಾಣುತ್ತಿದ್ದು, ಕೆಲವು ಸಂಗತಿಗಳನ್ನು ಮಾರ್ಕರ್‌ನಲ್ಲಿ ಬರೆದುಕೊಂಡಿದ್ದು ವಿಶೇಷವಾಗಿತ್ತು.

ಪೇಪರ್‌ನ ಮೇಲಿನ ಭಾಗದಲ್ಲಿ ಸಾಂವಿಧಾನಿಕ ಕರ್ತವ್ಯಗಳು ಎಂದು ಅಡಿಬರಹವಿದ್ದು, ಅದರಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಅವರಿಗೆ ವಿವರಣೆ ನೀಡುವುದು, ಕೇಂದ್ರ ಸಂಪುಟ ಸಭೆ, ರಾಜ್ಯಸಭೆಯಲ್ಲಿ ಮಸೂದೆ ಮಂಡನೆ ಕುರಿತು ನೋಟ್ಸ್ ಇವೆ.

ಬಳಿಕ ರಾಜಕೀಯ ಎಂಬ ಅಡಿಬರಹದಲ್ಲಿ ಎನ್‌ಡಿಎ ಸಂಸದರಿಗೆ ಮಸೂದೆ ಕುರಿತು ವಿವರಣೆ ನೀಡುವುದು, ಸರ್ವಪಕ್ಷ ಸಭೆಯಲ್ಲಿ ಮಸೂದೆ ಚರ್ಚೆ, ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಕುರಿತು ನೋಟ್ಸ್ ಇವೆ.

ಕಾನೂನು ಮತ್ತು ಸುವ್ಯವಸ್ಥೆ ಸಡಿಬರಹದಲ್ಲಿ ಗೃಹ ಕಾರ್ಯದರ್ಶಿಯನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸುವುದು, ಕಣಿವೆಯಲ್ಲಿ ಹಿಂಸಾಚಾರ ಭೂಗಿಲೇಳುವ ಸಾಧ್ಯತೆ ಕಂಡು ಬಂದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಣೆ ಇದೆ.

ಅಮಿತ್ ಶಾ ಅವರ ಈ ಪೇಪರ್‌ನಿಂದ ಜಮ್ಮು ಮತ್ತು ಕಾಶ್ಮೀರ ಕುರಿತು ಕೇಂದ್ರ ಸರ್ಕಾರ ಅದೆಷ್ಟು ಗಾಂಭೀರ್ಯತೆಯ ಹೆಜ್ಜೆ ಇಡುತ್ತಿದೆ ಮತ್ತು ಎಷ್ಟು ಸೂಕ್ಷ್ಮವಾಗಿ ಮತ್ತು ಅಷ್ಟೇ ಚುರುಕಾಗಿ ಕ್ರಮ ಕೈಗೊಂಡಿದೆ ಎಂಬುದು ಸಾಬೀತಾಗಿದೆ.