ಟೆಕ್ಸಾಸ್(ಜು.12): ನಾಯಿ ಮನುಷ್ಯನ ಅತ್ಯಂತ ನಂಬಿಗಸ್ಥ ಪ್ರಾಣಿ ಅಂತಾರೆ. ತನ್ನ ಮಾಲೀಕನಿಗಾಗಿ ಸಾಕುನಾಯಿಗಳು ತಮ್ಮ ಜೀವವನ್ನೇ ಕೊಡುತ್ತವೆ. ಆದರೆ ಇದಕ್ಕೆ ಅಪವಾದ ಎಂಬಂತೆ ಅತ್ಯಂತ ಪ್ರೀತಿಯಿಂದ ಸಾಕಿದ ನಾಯಿಗಳೇ ಮಾಲೀಕನನ್ನು ತಿಂದು ತೇಗಿದ ಹೃದಯ ವಿದ್ರಾವಕ ಘಟನೆ ಟೆಕ್ಸಾಸ್’ನಲ್ಲಿ ನಡೆದಿದೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇಲ್ಲಿನ ಫ್ರೆಡಿ ಮ್ಯಾಕ್ ಎಂಬ ವ್ಯಕ್ತಿ ತನ್ನ 18 ನಾಯಿಗಳೊಂದಿಗೆ ತನ್ನ ಫಾರ್ಮ್ ಹೌಸ್’ಗೆ ತೆರಳಿದ್ದ. ಕಳೆದೊಂದು ತಿಂಗಳಿನಿಂದ ಮ್ಯಾಕ್ ಕುರಿತು ಯಾವುದೇ ಮಾಹಿತಿಯೇ ಇರಲಿಲ್ಲ ಎನ್ನಲಾಗಿದೆ.

ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮ್ಯಾಕ್ ಅಥವಾ ಆತನ ಶವಕ್ಕಾಗಿ ಶೋಧ ನಡೆಸುತ್ತಲೇ ಇದ್ದರು. ಈ ಮಧ್ಯೆ ಆತನ ನಾಯಿಗಳನ್ನು ಪರಿಶೀಲನೆ ನಡೆಸಿದಾಗ ಅವುಗಳ ದೇಹದಲ್ಲಿ ಮ್ಯಾಕ್’ನ ದೇಹದ ಅಂಶಗಳು ಪತ್ತೆಯಾಗಿವೆ ಎನ್ನಲಾಗಿದೆ.

ಅನಾರೋಗ್ಯಪೀಡಿತ ಮ್ಯಾಕ್’ನನ್ನು ಆತನ ಸಾಕುನಾಯಿಗಳೇ ಕೊಂದು ತಿಂದವೋ ಅಥವಾ ಆತ ಅಸುನೀಗಿದ ಬಳಿಕ ಆತನ ಮೃತದೇಹವನ್ನಷ್ಟೇ ತಿಂದಿವೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.