ಶ್ರೀನಗರ[ಅ.01]: ಜಮ್ಮು-ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ಎಸಗುತ್ತಲೇ ಬಂದಿರುವ ಪಾಕಿಸ್ತಾನ ಮೂಲದ ಭಯೋತ್ಪಾದಕರು ಅಂತಾರಾಷ್ಟ್ರೀಯ ಗಡಿಯೊಳಕ್ಕೆ ಒಳನುಸುಳಲು ಅಮಾವಾಸ್ಯೆ ದಿನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಇತ್ತೀಚಿನ ವರ್ಷಗಳಲ್ಲಿ ನಡೆದ ಒಳನುಸುಳವಿಕೆ ಪ್ರಯತ್ನ, ಭಯೋತ್ಪಾದಕ ದಾಳಿಗಳನ್ನು ವಿಸ್ತೃತವಾಗಿ ಪರಿಶೀಲನೆಗೆ ಒಳಪಡಿಸಿದಾಗ, ಅಮಾವಾಸ್ಯೆ ದಿನದಂದು ನಸುಕಿನ ಜಾವ 2ರಿಂದ 5ರ ನಡುವಣ ಅವಧಿಯಲ್ಲಿ ಉಗ್ರರು ಅಂತಾರಾಷ್ಟ್ರೀಯ ಗಡಿಯೊಳಕ್ಕೆ ನುಗ್ಗುತ್ತಾರೆ. ಈ ಸಂದರ್ಭದಲ್ಲಿ ರಾತ್ರಿ ನಿಗಾ ವಹಿಸಬೇಕಾದ ಕ್ಯಾಮೆರಾಗಳು ಪರಿಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವುದಿಲ್ಲ ಎಂಬ ವಿಷಯ ಗೊತ್ತಾಗಿದೆ.

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈ ಕುರಿತು ವರದಿಯೊಂದನ್ನು ಸಿದ್ಧಪಡಿಸಿದ್ದು, ಅದನ್ನು ಜಮ್ಮು-ಕಾಶ್ಮೀರ ಪೊಲೀಸರ ಜತೆ ಹಂಚಿಕೊಂಡಿದೆ. ಉಗ್ರರ ಕರೆ ವಿವರ, ಐಕಾಂ ವಿಎಚ್‌ಎಫ್‌ ಸೆಟ್‌, ಬಂಧಿತ ಉಗ್ರರ ಹೇಳಿಕೆಯನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ.

2016ರಿಂದ 2018ರ ಅವಧಿಯಲ್ಲಿ 20ಕ್ಕೂ ನಗರೋಟಾ ಸೇರಿದಂತೆ ಕಾಶ್ಮೀರದ ವಿವಿಧೆಡೆ ಭಯೋತ್ಪಾದಕರು 20 ಯೋಧರನ್ನು ಹತ್ಯೆಗೈದಿದ್ದಾರೆ. ಈ ದಾಳಿಕೋರರು ಸಾಂಬಾ- ಜಮ್ಮು- ಉಧಂಪುರ ಹಾಗೂ ಸಾಂಬಾ- ಮನ್ಸಾ- ಉಧಂಪುರ ಮಾರ್ಗದಲ್ಲಿ ಬಂದಿದ್ದಾರೆ. ಈ ರೀತಿ ಬಂದವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಕಾಶ್ಮೀರದಲ್ಲಿರುವ ಅವರ ಬೆಂಬಲಿಗರು ಟ್ರಕ್‌ಗಳನ್ನು ವ್ಯವಸ್ಥೆ ಮಾಡಿರುತ್ತಾರೆ. ಒಳನುಸುಳುವ ಎರಡು ದಿನ ಮೊದಲು ಗಡಿಯಲ್ಲಿ ಉಗ್ರರು ಆಗಮಿಸಿರುತ್ತಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.