ಶ್ರೀನಗರ [ಆ.03]: ಹಿಂದೂಗಳ ಪವಿತ್ರ ಅಮರನಾಥ ಯಾತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪಾಕಿಸ್ತಾನ ಹಾಗೂ ಪಾಕಿಸ್ತಾನ ಸೇನೆಯ ಮುಂದಾಳತ್ವದಲ್ಲಿ ಆ ದೇಶದ ಭಯೋತ್ಪಾದಕರು ಹೊಂಚು ಹಾಕಿದ್ದಾರೆ ಎಂಬ ಸ್ಫೋಟಕ ಸಂಗತಿಯನ್ನು ಸ್ವತಃ ಭಾರತೀಯ ಸೇನೆಯೇ ಶುಕ್ರವಾರ ಬಹಿರಂಗಪಡಿಸಿದೆ. ಇದಕ್ಕೆ ಪುಷ್ಟಿನೀಡುವಂತೆ, ಯಾತ್ರಾ ಮಾರ್ಗದಲ್ಲಿ ನೆಲಬಾಂಬ್‌, ಅಮೆರಿಕ ನಿರ್ಮಿತ ಎಂ-24 (ಸ್ನೈಪರ್‌) ರೈಫಲ್‌ ಹಾಗೂ ಪಾಕಿಸ್ತಾನ ನಿರ್ಮಿತ ಹಲವು ಸ್ಫೋಟಕ ಸಾಮಗ್ರಿಗಳನ್ನು ಸೇನೆ ವಶಪಡಿಸಿಕೊಂಡಿದೆ. ತನ್ಮೂಲಕ ಸಂಭಾವ್ಯ ಅಪಾಯವೊಂದರಿಂದ ಯಾತ್ರಿಕರನ್ನು ಪಾರು ಮಾಡಿದೆ.

ಇದರ ಬೆನ್ನಲ್ಲೇ ಹಾಲಿ ಕೈಗೊಂಡಿರುವ ಯಾತ್ರೆಯನ್ನು ಸ್ಥಗಿತಗೊಳಿಸಿ, ತಕ್ಷಣವೇ ಕಣಿವೆ ರಾಜ್ಯದಿಂದ ಹೊರಡುವಂತೆ ಯಾತ್ರಾರ್ಥಿಗಳಿಗೆ ಜಮ್ಮು-ಕಾಶ್ಮೀರ ಸರ್ಕಾರ ಸೂಚನೆ ನೀಡಿದೆ. ಜು.1ರಿಂದ ಆರಂಭಗೊಂಡಿರುವ ಯಾತ್ರೆ ಆ.15ರಂದು ಮುಕ್ತಾಯಗೊಳ್ಳಬೇಕಾಗಿದೆ.

ಗುಪ್ತಚರ ಮಾಹಿತಿಯಿಂದ ಬೆಳಕಿಗೆ:

ಕಾಶ್ಮೀರದ ಡಿಜಿಪಿ ದಿಲ್‌ಬಾಘ್‌ ಸಿಂಗ್‌ ಜತೆಗೂಡಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಸೇನೆಯ 15ನೇ ಕೋರ್‌ನ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಲೆಫ್ಟಿನೆಂಟ್‌ ಜನರಲ್‌ ಕೆ.ಜೆ.ಎಸ್‌. ಧಿಲ್ಲೋನ್‌ ಅವರು, ಪಾಕಿಸ್ತಾನ ಹಾಗೂ ಪಾಕಿಸ್ತಾನ ಸೇನೆಯ ನೇತೃತ್ವದಲ್ಲಿ ಭಯೋತ್ಪಾದಕರು ಹಾಲಿ ನಡೆಯುತ್ತಿರುವ ಅಮರನಾಥ ಯಾತ್ರೆ ಮೇಲೆ ದಾಳಿ ನಡೆಸಲು ಯತ್ನಿಸುತ್ತಿದ್ದಾರೆ ಎಂಬ ನಿರ್ದಿಷ್ಟಹಾಗೂ ಖಚಿತ ಗುಪ್ತಚರ ಮಾಹಿತಿ ಕಳೆದ ಮೂರ್ನಾಲ್ಕು ದಿನಗಳಿಂದ ಬಂದಿದೆ. ಕಾಶ್ಮೀರ ಕಣಿವೆಯಲ್ಲಿನ ಶಾಂತಿಯನ್ನು ಹಾಳುಗೆಡವಲು ಪಾಕಿಸ್ತಾನ ಹಾಗೂ ಅದರ ಸೇನೆ ಹತಾಶ ಸ್ಥಿತಿಗೆ ತಲುಪಿದ್ದಾರೆ ಎಂದು ದೂರಿದರು.

"

ಅಮರನಾಥ ಯಾತ್ರೆ ಸಾಗುವ ಎರಡು ಮಾರ್ಗಗಳಾದ ಬಾಲ್ಟಲ್‌ ಹಾಗೂ ಪಹಾಲ್ಗಾಮ್‌ ಹಾದಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಸಲಾಧ ಶೋಧ ಕಾರ್ಯಾಚರಣೆ ವೇಳೆ, ಪಾಕಿಸ್ತಾನ ನಿರ್ಮಿತ ನೆಲಬಾಂಬ್‌ ಹಾಗೂ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆಯಾಗಿವೆ. ಕಾರ್ಯಾಚರಣೆಯ ವೇಳೆ ಕೆಲವು ಐಇಡಿ ಬಾಂಬ್‌ಗಳು ಲಭ್ಯವಾಗಿದ್ದು, ಅವುಗಳನ್ನು ನಿಷ್ಕಿ್ರಯಗೊಳಿಸಲಾಗಿದೆ. ಅಮೆರಿಕ ನಿರ್ಮಿತ ಎಂ- 24 ಸ್ನೈಪರ್‌ ರೈಫಲ್‌ಗಳು ಮತ್ತು ಪಾಕಿಸ್ತಾನದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ತಯಾರಾದ ನೆಲಬಾಂಬ್‌ಗಳು ಸಿಕ್ಕಿವೆ. ಇವು ಕಾಶ್ಮೀರ ಭಯೋತ್ಪಾದನೆಯಲ್ಲಿ ಪಾಕಿಸ್ತಾನ ಭಾಗಿಯಾಗಿರುವುದರ ಸ್ಪಷ್ಟಸೂಚನೆಯಾಗಿದೆ. ಗುಪ್ತಚರ ಮಾಹಿತಿಯ ಪ್ರಕಾರ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಎಲ್ಲಾ ಉಗ್ರ ನೆಲೆಗಳು ಉಗ್ರರಿಂದ ಭರ್ತಿಯಾಗಿದ್ದು, ಉಗ್ರರು ಗಡಿನಿಯಂತ್ರಣ ರೇಖೆಯ ಗುಂಟ ದಾಳಿ ನಡೆಸಲು ಯತ್ನ ನಡೆಸುತ್ತಿದ್ದಾರೆ ಎಂದು ಧಿಲ್ಲೋನ್‌ ಹೇಳಿದ್ದಾರೆ.

ಅಮರನಾಥ ಯಾತ್ರೆ ಮೇಲೆ ಹಿಂದೆ ನಡೆದಿದ್ದ ದಾಳಿಗಳು

- 2017ರ ಜು.10ರಂದು ಯಾತ್ರಿಕರು ಇದ್ದ ಬಸ್‌ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಗುಜರಾತಿನ ಐವರು ಹಾಗೂ ಮಹಾರಾಷ್ಟ್ರದ ಇಬ್ಬರು ಸೇರಿ ಒಟ್ಟು 7 ಮಂದಿ ಮೃತಪಟ್ಟಿದ್ದರು.

- 2001ರ ಜು.20ರಂದು ಅಮರನಾಥ ಯಾತ್ರೆ ಗುಹೆ ಸಮೀಪವೇ ಉಗ್ರರು ನಡೆಸಿದ ದಾಳಿಗೆ 13 ಭಕ್ತರು ಹತರಾಗಿದ್ದರು.

- 2000ರ ಆ.1ರಂದು ಪಹಾಲ್ಗಾಮ್‌ ಪ್ರದೇಶದಲ್ಲಿ ದಾಳಿ ನಡೆಸಿದ್ದ ಭಯೋತ್ಪಾದಕರು 30 ಅಮರನಾಥ ಯಾತ್ರಿಕರನ್ನು ಕೊಂದಿದ್ದರು.

ಇಂದು ಕಲ್ಲೆಸೆವವರು ನಾಳಿನ ಭಯೋತ್ಪಾದಕರು: ಸೇನೆ

ಜಮ್ಮು- ಕಾಶ್ಮೀರದಲ್ಲಿ ಕೇವಲ 500 ರು. ಆಸೆಗಾಗಿ ಕಲ್ಲೆಸೆತ ಶುರು ಮಾಡಿದ ಶೇ.83ರಷ್ಟುಯುವಕರು ಮುಂದೊಂದು ದಿನ ಗನ್‌ ಹಿಡಿದು ಭಯೋತ್ಪಾದಕರಾಗಿ ಬದಲಾಗಬಹುದು. ಹೀಗಾಗಿ ಅವರನ್ನು ತಡೆಯಬೇಕಿದೆ ಎಂದು ಪೋಷಕರಿಗೆ ಭಾರತೀಯ ಸೇನೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಜಂಟಿ ಸುದ್ದಿಗೋಷ್ಠಿಯ ವೇಳೆ ಬೆಚ್ಚಿ ಬೀಳಿಸುವ ಅಂಕಿ-ಅಂಶಗಳನ್ನು ನೀಡಿದ ಲೆ. ಜ. ಧಿಲ್ಲೋನ್‌, ಗನ್‌ ಹಿಡಿದು ಭಯೋತ್ಪಾದಕರಾದ ಬಹುತೇಕ ಎಲ್ಲಾ ಯುವಕರನ್ನು ಕಳೆದ 5 ವರ್ಷಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ. ಶಸ್ತ್ರಾಸ್ತ್ರ ತ್ಯಜಿಸುವಂತೆ ನಾವು ಯುವಕರನ್ನು ಪ್ರೋತ್ಸಾಹಿಸುತ್ತಿದ್ದೇವೆ. ಆದರೆ, ಶೇ.83ರಷ್ಟುಭಯೋತ್ಪಾದಕರು ಕಲ್ಲು ತೂರಾಟದ ಇತಿಹಾಸ ಹೊಂದಿದ್ದಾರೆ ಎಂದು ಹೇಳಿದ್ದಾರೆ.

"