ಜೈಪುರ (ಆ. 30): ‘ರಾಜಸ್ಥಾನದ ಜೈಪುರದ ವಿಮಾನ ನಿಲ್ದಾಣದಲ್ಲಿ ಬಂದೂಕು ಹಿಡಿದು ಮನಬಂದಂತೆ ಉಗ್ರನೊಬ್ಬ ಗುಂಡು ಹಾರಿಸು ತ್ತಿದ್ದ, ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ.

ಸದ್ಯ ಆ ಭಯೋತ್ಪಾದಕನನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ ’ ಎಂಬ ಒಕ್ಕಣೆಯೊಂದಿಗಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಹಗ್ಗದಿಂದ ಕಟ್ಟಿ ಥಳಿಸುತ್ತಿರುವ ದೃಶ್ಯವಿದೆ.

ಆದರೆ ಜೈಪುರ ವಿಮಾನ ನಿಲ್ದಾಣದ ಎಲ್ಲೆಡೆ ಮನಬಂದಂತೆ ಗುಂಡು ಹಾರಿಸುತ್ತಿದ್ದ ಭಯೋತ್ಪಾದಕನನ್ನು ಬಂಧಿಸಿದ್ದು ನಿಜವೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ. ಜೈಪುರ ವಿಮಾನ ನಿಲ್ದಾಣದ ಬಳಿ ಕುಡಿದು ಕಾರು ಅಪಹರಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದು ವರದಿಯಾಗಿತ್ತು. ಆದರೆ ಆತನ ಬಳಿ ಯಾವುದೇ ಶಸ್ತ್ರಾಸ್ತ್ರಗಳು ಇರಲಿಲ್ಲ, ಹಾಗೆಯೇ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟೂ ಇರಲಿಲ್ಲ.

ಸುದ್ದಿಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದು, ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕನೊಬ್ಬ ಅಲ್ಲಿದ್ದ ಕಾರೊಂದನ್ನು ಅಪಹರಿಸಲು ಯತ್ನಿಸಿದ್ದಾನೆ. ಬಳಿಕ ಅಲ್ಲಿದ್ದ ಸಿಬ್ಬಂದಿಗಳು ಆತನನ್ನು ಸೆರೆಹಿಡಿದಿದ್ದರು. ಕೇಂದ್ರೀಯ ಮೀಸಲು ಪಡೆಯ ಉನ್ನತ ಅಧಿಕಾರಿಗಳೇ ಈ ಘಟನೆ ಬಗ್ಗೆ ಸ್ಪಷ್ಟಪಡಿಸಿದ್ದು, ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ದುರ್ವರ್ತನೆ ತೋರಿದ್ದರಿಂದ ಆತನನ್ನು ಬಂಧಿಸಲಾಗಿದೆ.

ಆದರೆ ಆತನಿಗೆ ಯಾವುದೇ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಇಲ್ಲ’ ಎಂದಿದ್ದಾರೆ. ಹಾಗಾಗಿ ಜೈಪುರ ವಿಮಾನ ನಿಲ್ದಾಣದಲ್ಲಿ ಮನ ಬಂದಂತೆ ಗುಂಡು ಹಾರಿಸುತ್ತಿದ್ದ ಉಗ್ರನ ಬಂಧನ ಎಂಬ
ಒಕ್ಕಣೆಯೊಂದಿಗೆ ಹರಿದಾಡುತ್ತಿರುವ ವಿಡಿಯೋ ಸುಳ್ಳು. 

-ವೈರಲ್ ಚೆಕ್