ಹುಬ್ಬಳ್ಳಿ/ಮಂಗಳೂರು: ಜು.16ರಂದು ನಡೆಯಲಿರುವ ಚಂದ್ರಗ್ರಹಣ ಪ್ರಯುಕ್ತ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನ, ಪೂಜೆಗಳ ಸಮಯದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. 

ಎಲ್ಲ ದೇವಸ್ಥಾನಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನದ ಪೂಜೆ, ದರ್ಶನಗಳು ಯಥಾಪ್ರಕಾರ ನಡೆಯಲಿದೆ. ಸಂಜೆ ಪೂಜೆ, ದರ್ಶನಗಳ ವೇಳೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾತ್ರಿಯ ಮಹಾಪೂಜೆ ಸಂಜೆ 6.30ಕ್ಕೆ ನೆರವೇರಲಿದ್ದು, 7 ಗಂಟೆಗೆ ದೇವಳದ ಬಾಗಿಲು ಮುಚ್ಚಲಾಗುವುದು. ಆ ದಿನ ಸಾಯಂಕಾಲ ಆಶ್ಲೇಷ ಬಲಿ ಸೇವೆ, ರಾತ್ರಿ ಭೋಜನ ಪ್ರಸಾದ ವ್ಯವಸ್ಥೆ ಇರುವುದಿಲ್ಲ. 

ಶಿರಸಿ ಮಾರಿಕಾಂಬಾ ದೇವಾಲಯದಲ್ಲೂ ಸಂಜೆ 7 ಗಂಟೆಯೊಳಗೆ ಮಹಾಪೂಜೆಯನ್ನು ನೆರವೇರಿಸಿ ದೇವಾಲಯದ ಬಾಗಿಲು ಹಾಕಲಾಗುತ್ತದೆ. ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಸಂಜೆ 6 ಗಂಟೆವರೆಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯ, ಇಡಗುಂಜಿ ವಿನಾಯಕ ದೇವಸ್ಥಾನಗಳದಲ್ಲಿ ಗ್ರಹಣ ಕಾಲದಲ್ಲಿ, ಅಂದರೆ ರಾತ್ರಿ 1.32ರಿಂದ ಮುಂಜಾನೆ 4.29ರವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ದೇವರಿಗೆ ಅಭಿಷೇಕ, ಪೂಜೆ ನೆರವೇರಲಿದೆ.