ಒಂದೂವರೆ ದಶಕದಿಂದ ನಕಲಿ ಹೆಸರಿನಲ್ಲಿ ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗ ಪಡೆದು ನೆಲೆಸಿದ್ದ ಆರೋಪಿ, ಇತ್ತೀಚೆಗೆ ಪತ್ನಿ ಕೊಲೆ ಪ್ರಕರಣದ ಮಾಹಿತಿ ಪಡೆಯಲು ಸಂಬಂಧಿಕರಿಗೆ ಕರೆ ಮಾಡಿದ್ದ. ಈ ಸಂಗತಿಯು ಅಹಮದಾಬಾದ್ ನಗರದ ಪೊಲೀಸರಿಗೆ ಲಭ್ಯವಾಯಿತು. ತಕ್ಷಣವೇ ಅಲ್ಲಿನ ಹಿರಿಯ ಅಧಿಕಾರಿಗಳು, ಸಿಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿ ಆರೋಪಿ ಕುರಿತು ಮಾಹಿತಿ ನೀಡಿದ್ದರು. ಮಂಗಳವಾರ ರಾತ್ರಿ ಆರೋಪಿಯನ್ನು ಬಂಧಿಸಲಾಗಿದೆ.

ಬೆಂಗಳೂರು[ಅ.25]: ಹದಿನೈದು ವರ್ಷ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತ್ನಿ ಕೊಂದು ಬೆಂಗಳೂರಿನಲ್ಲಿ ಆಶ್ರಯ ಪಡೆದಿದ್ದ ಗುಜರಾತ್ ಮೂಲದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬ ಕೊನೆಗೂ ಮಂಗಳವಾರ ರಾತ್ರಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಕುತೂಹಲಕಾರಿ ಘಟನೆ ನಡೆದಿದೆ. ಅಹಮದಾಬಾದ್ ನಗರದ ನಿವಾಸಿ ತರುಣ್ ಜಿನ್‌ರಾಜ್ ಅಲಿಯಾಸ್ ಪ್ರವೀಣ್ ಬಾಟಲೆ ಬಂಧಿತನಾಗಿದ್ದು, ಆತನನ್ನು ಬುಧವಾರ ವಶಕ್ಕೆ ಪಡೆದು ಗುಜರಾತ್ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.

ಒಂದೂವರೆ ದಶಕದಿಂದ ನಕಲಿ ಹೆಸರಿನಲ್ಲಿ ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗ ಪಡೆದು ನೆಲೆಸಿದ್ದ ಆರೋಪಿ, ಇತ್ತೀಚೆಗೆ ಪತ್ನಿ ಕೊಲೆ ಪ್ರಕರಣದ ಮಾಹಿತಿ ಪಡೆಯಲು ಸಂಬಂಧಿಕರಿಗೆ ಕರೆ ಮಾಡಿದ್ದ. ಈ ಸಂಗತಿಯು ಅಹಮದಾಬಾದ್ ನಗರದ ಪೊಲೀಸರಿಗೆ ಲಭ್ಯವಾಯಿತು. ತಕ್ಷಣವೇ ಅಲ್ಲಿನ ಹಿರಿಯ ಅಧಿಕಾರಿಗಳು, ಸಿಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿ ಆರೋಪಿ ಕುರಿತು ಮಾಹಿತಿ ನೀಡಿದ್ದರು. ಮಂಗಳವಾರ ರಾತ್ರಿ ಆರೋಪಿಯನ್ನು ಬಂಧಿಸಲಾಗಿದೆ.

15 ವರ್ಷಗಳ ಕೊಲೆ ರಹಸ್ಯ: ಐಸಿಐಸಿಐ ಬ್ಯಾಂಕ್ ಉದ್ಯೋಗಿ ಸಜನಿ ಜತೆ ತರುಣ್ ಜಿನ್‌ರಾಜ್ ವಿವಾಹವಾಗಿದ್ದ. ಬಾಸ್ಕೆಟ್ ಬಾಲ್ ಆಟಗಾರನಾಗಿದ್ದ ತರುಣ್, ಬೇರೊಬ್ಬ ಯುವತಿ ಜತೆ ಸ್ನೇಹ ಹೊಂದಿದ್ದ. ಈ ವಿಷಯ ತಿಳಿದ ಸಜನಿ, ಪತಿ ವಿರುದ್ಧ ಗಲಾಟೆ ಮಾಡಿದ್ದರು. 2003ರ ಫೆಬ್ರವರಿ 14ರಂದು ಮನೆಯಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಆರೋಪಿ ಹತ್ಯೆ ಮಾಡಿದ್ದ. ಈ ಹತ್ಯೆಗೆ ತರುಣ್‌ನ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರ ಸಹಕಾರವಿತ್ತು.

ಹತ್ಯೆ ಬಳಿಕ ತರುಣ್, ತಾನೇ ಹೋಗಿ ಮನೆಗೆ ಡಕಾಯಿತರು ನುಗ್ಗಿ ಪತ್ನಿ ಕೊಂದು ಚಿನ್ನಾಭರಣ ದೋಚಿದ್ದಾರೆ ಎಂದು ಸುಳ್ಳು ದೂರು ಕೊಟ್ಟಿದ್ದ. ಈ ಬಗ್ಗೆ ತನಿಖೆ ನಡೆಸಿದ ಅಹಮದಾಬಾದ್ ಪೊಲೀಸರು, ಆರಂಭದಲ್ಲಿ ತರುಣ್ ಮೇಲೆ ಅನುಮಾನಿಸಲಿಲ್ಲ. ದೂರಿನಂತೆ ತನಿಖೆ ಮುಂದುವರಿಸಿದ ಪೊಲೀಸರಿಗೆ ನಿಧಾನವಾಗಿ ಕೊಲೆ ಹಿಂದಿನ ರಹಸ್ಯ ಒಂದೊಂದಾಗಿ ಅರವಿಗೆ ಬಂದಿತು. ಅಷ್ಟರಲ್ಲಿ ಬಂಧನ ಭೀತಿಯಿಂದ ತರುಣ್, ಅಹಮದಾಬಾದ್ ತೊರೆದು ಬೆಂಗಳೂರಿಗೆ ಆಶ್ರಯ ಪಡೆದಿದ್ದ. ಅತ್ತ ಅಹಮದಾಬಾದ್ ಪೊಲೀಸರು, ಕೊಲೆ ಪ್ರಕರಣ ಸಂಬಂಧ ಆತನ ಸಂಬಂಧಿಕರನ್ನು ಬಂಧಿಸಿದ್ದರು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ನಕಲಿ ಹೆಸರು, ರಾತ್ರಿ ಪಾಳಿ ಕೆಲಸ: ಪತ್ನಿ ಕೊಂದು ಬೆಂಗಳೂರಿಗೆ ಓಡಿ ಬಂದ ತರುಣ್, ಒರೇಕಲ್ ಸಾಫ್ಟ್‌ವೇರ್ ಕಂಪನಿಯಲ್ಲಿ ‘ಪ್ರವೀಣ್ ಬಾಟಲೆ’ ನಕಲಿ ಹೆಸರು ನೀಡಿ ಕೆಲಸಕ್ಕೆ ಸೇರಿದ್ದ. ಬಳಿಕ ಹಂತ ಹಂತವಾಗಿ ಮುಂಬಡ್ತಿ ಪಡೆದು ಆ ಕಂಪನಿಯ ಹಿರಿಯ ವ್ಯವಸ್ಥಾಪಕ ಹುದ್ದೇಗೇರಿದ. ತನ್ನ ಮೇಲಿದ್ದ ಕೊಲೆ ಪ್ರಕರಣವು ತಣ್ಣಗಾಗಿದೆ ಎಂದೂ ಭಾವಿಸಿದ ಆರೋಪಿ, ಕಳೆದುಕೊಂಡಿದ್ದ ಕುಟುಂಬದ ಜತೆ ಸಂಪರ್ಕವನ್ನು ಮತ್ತೆ ಸಾಧಿಸಿದ. ಇತ್ತ ಹದಿನೈದು ವರ್ಷಗಳಿಂದಲೂ ಆರೋಪಿ ಮೇಲೆ ನಿಗಾವಹಿಸಿದ್ದ ಅಲ್ಲಿನ ಪೊಲೀಸರಿಗೆ ತರುಣ್ ಕರೆ ವಿಷಯವು ಗೊತ್ತಾಯಿತು. ಬಳಿಕ ಆತನ ಸಂಬಂಧಿಕನೊಬ್ಬನನ್ನು ವಶಕ್ಕೆ ಪಡೆದು ತೀವ್ರವಾಗಿ ಪ್ರಶ್ನಿಸಿದಾಗ ತರುಣ್ ಇರುವಿಕೆ ವಿವರ ಸಿಕ್ಕಿದೆ. ಕೂಡಲೇ ಅಲ್ಲಿನ ಅಧಿಕಾರಿಗಳು, ಬೆಂಗಳೂರಿನ ಸಿಸಿಬಿ ಮುಖ್ಯಸ್ಥ ಅಲೋಕ್ ಕುಮಾರ್ ಅವರನ್ನು ಸಂಪರ್ಕಿಸಿ ತನಿಖೆಗೆ ನೆರವು ಕೋರಿದರು. ಡಿಸಿಪಿ ಎಸ್.ಗಿರೀಶ್, ಎಸಿಪಿ ವೆಂಕಟೇಶ್ ಪ್ರಸನ್ನ ನೇತೃತ್ವದಲ್ಲಿ ತಂಡ ರಚಿಸಿದರು. ಮೊದಲು ಒರೇಕಲ್ ಕಂಪನಿಯಲ್ಲಿ ತರುಣ್ ಹೆಸರಿನ ಉದ್ಯೋಗಿ ಬಗ್ಗೆ ವಿಚಾರಿಸಿದಾಗ ಆ ಹೆಸರಿನ ಯಾರೂ ಪತ್ತೆಯಾಗಲಿಲ್ಲ. ಇನ್ನೂ ಆರೋಪಿಯ 15 ವರ್ಷಗಳ ಭಾವಚಿತ್ರವನ್ನು ಅಹಮದಾಬಾದ್ ಪೊಲೀಸರು ಕೊಟ್ಟಿದ್ದರು. ಹೀಗಾಗಿ ಆರೋಪಿಯ ಮುಖ ಚಹರೆ ಪತ್ತೆ ಹಚ್ಚುವುದು ಕಷ್ಟವಾಯಿತು. ಇದರಿಂದ ಮತ್ತೆ ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದಾಗ ಆರೋಪಿ ಬೇರೊಂದು ಹೆಸರು ಕೊಟ್ಟು ಕೆಲಸದಲ್ಲಿರುವ ಸಂಗತಿ ತಿಳಿಯಿತು. ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳ ಬಳಿ ಕಂಪನಿಯ
ಉದ್ಯೋಗಿಗಳ ಗುರುತಿನ ಪತ್ರ ಪಡೆದು ನೋಡಿದಾಗ ಆರೋಪಿಯ ಹಳೆ ಭಾವಚಿತ್ರವನ್ನೇ ಹೋಲುತ್ತಿದ್ದ ತರುಣ್ ಸುಳಿವು ಸಿಕ್ಕಿತು. ಅದರಂತೆ ಬುಧವಾರ ರಾತ್ರಿ ಕೆಲಸಕ್ಕೆ ಬಂದಾಗ ಹಿಂದಿನಿಂದ ಹೋಗಿ ಜಿನ್ ರಾಜ್ ಎಂದೂ ಕೂಗಿದವು. ಥಟ್‌ನೇ ಹಿಂತಿರುಗಿದ. ಆಗ ಆತನೇ ಆರೋಪಿ ಖಚಿತವಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಕೆಲಸಕ್ಕೆ ಸೇರಿದ ದಿನದಿಂದಲೂ ಕಂಪನಿಯಲ್ಲಿ ರಾತ್ರಿ ಪಾಳೆಯದಲ್ಲೇ ಅವನು ಕೆಲಸ ಮಾಡಿದ್ದ. ಬಂಧನ ಬಳಿಕ ಆರೋಪಿ, ತಾನೇ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬುಧವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ ಅಹಮದಾಬಾದ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕರೆದೊಯ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋದಿಗೆ ಸಜನಿ ಸಂಬಂಧಿಗಳ ದೂರು:

ಸಜನಿ ಹತ್ಯೆಯ ನಂತರ ಆಕೆಯ ಪೋಷಕರು ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ ದೂರು ನೀಡಿದ್ದರು. ಇದಾದ ನಂತರವೂ ಸಜನಿ ಯ ಹತ್ಯೆಯ ನಿಜವಾದ ಆರೋಪಿಯ ಪತ್ತೆಯಾಗಿರಲಿಲ್ಲ. ಹೀಗಾಗಿ ಸಜನಿ ಪೋಷಕರು ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮತ್ತೇ ಪ್ರಕರಣದ ಬಗ್ಗೆ ಮತ್ತೊಂದು ದೂರು ಸಲ್ಲಿಸಿದರು. ಇದಾದ ನಂತರ ಮೋದಿ ಅವರ ಸೂಚನೆ ಮೇರೆಗೆ ಪೊಲೀಸರು ಪ್ರಕರಣದ ತನಿಖೆಯನ್ನು ಮತ್ತೆ ಆರಂಭಿಸಿದರು. 

ಆರೋಪಿ ಗುಜರಾತ್‌ನಲ್ಲಿ ಪತ್ನಿಯನ್ನು ಕೊಂದು ನಗರಕ್ಕೆ ಬಂದು ತಲೆ ಮರೆಸಿಕೊಂಡಿದ್ದ. ಗುಜರಾತ್‌ನ ಪೊಲೀಸರು ಆರೋಪಿಯ ಸುಳಿವು ನೀಡಿದರು. ತನಿಖೆ ನಡೆಸಿದಾಗ ಅತನ ಗುರುತು ಪತ್ತೆ ಮಾಡಿ ವಶಕ್ಕೆ ಪಡೆದಿದ್ದೆವು. ಈಗ ಗುಜರಾತ್ ಪೊಲೀಸರು ಆತನನ್ನು ಕರೆದೊಯ್ದಿದ್ದಾರೆ.
- ಎಸ್.ಗಿರೀಶ್ ಡಿಸಿಪಿ ಸಿಸಿಬಿ