ಚುನಾವಣಾ ಪ್ರಚಾರಕ್ಕೆಂದು ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸುವ ವೇಳೆ ಭಾರೀ ಅವಘಡವೊಂದರಿಂದ ಪಾರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ವಿಮಾನವು ಆಗಸದಲ್ಲಿದ್ದಾಗಲೇ ಕುಸಿದಂತಾಗಿದ್ದು, ಲ್ಯಾಂಡ್ ಮಾಡುವಾಗಲೂ ಕೂಡ ಸಮಸ್ಯೆ ಕಂಡು ಬಂದಿದೆ.
ಹುಬ್ಬಳ್ಳಿ: ‘ಚುನಾವಣಾ ಪ್ರಚಾರಕ್ಕೆಂದು ಹುಬ್ಬಳ್ಳಿ ಮೂಲಕ ಕರ್ನಾಟಕದ ವಿವಿಧ ಭಾಗಗಳಿಗೆ ತೆರಳಲು ಬಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿದ್ದ ವಿಶೇಷ ವಿಮಾನ ಇದ್ದಕ್ಕಿದ್ದಂತೆ ಆಗಸದಲ್ಲಿದ್ದಾಗಲೇ ಕೆಳಗೆ ಕುಸಿದಂತಾಯಿತು.
ವಿಮಾನವು ಎಡಭಾಗಕ್ಕೆ ವಾಲಿದಂತಾಯಿತು. ೨ ಬಾರಿ ವಿಮಾನವನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಸಲು ಪೈಲಟ್ ಪ್ರಯತ್ನಿಸಿದರೂ ಪೈಲಟ್‌ಗೆ ಸಾಧ್ಯವಾಗಲಿಲ್ಲ.
ಇಷ್ಟೆಲ್ಲ ಆದರೂ ಕೂಡ ರಾಹುಲ್ ಗಾಂಧಿ ಅವರು ಪೈಲಟ್ ಬಳಿಯೇ ತಾಳ್ಮೆಯಿಂದ ನಿಂತು ಧೈರ್ಯ ತುಂಬಿದರು. ಇಂದು ನಾವು ಬದುಕಿ ಉಳಿದಿದ್ದೇ ಹೆಚ್ಚು.
ಇಂಥ ಭಯಾನಕ ಅನುಭವ ಎಂದೂ ಆಗಿರಲಿಲ್ಲ.’ - ಇದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಪ್ತ ಕೌಶಲ್ ವಿದ್ಯಾರ್ಥಿ ಗುರುವಾರ ತಮ್ಮ ‘ಭಯಂಕರ ಅನುಭವ’ದ ಬಗ್ಗೆ ಮಾಡಿದ ಟ್ವೀಟ್.
ಅಲ್ಲದೆ, ಕರ್ನಾಟಕ ಡಿಜಿಪಿ ನೀಲಮಣಿ ರಾಜು ಅವರಿಗೆ ಈ ಸಂಬಂಧ ಸವಿಸ್ತಾರವಾದ ದೂರನ್ನೂ ಕೊಟ್ಟಿರುವ ಅವರು, ರಾಹುಲ್ ಅವರಂಥ ಅತಿಗಣ್ಯ ವ್ಯಕ್ತಿಯ ವಿಮಾನ ೨ ಬಾರಿ ತಾಂತ್ರಿಕ ತೊಂದರೆಗೆ ಒಳಗಾಗಿ ಭೂಸ್ಪರ್ಶ ಮಾಡಲು ಆಗದೆ ಆತಂಕ ಎದುರಾದ ಬಗ್ಗೆ ವಿವರಿಸಿದ್ದಾರೆ.
ಈ ಬಗ್ಗೆ ಸಮಗ್ರ ತನಿಖೆಗೂ ಕೋರಿ ದ್ದಾರೆ. ಇದರ ಬೆನ್ನಲ್ಲೇ, ನಾಗರಿಕ ವಿಮಾನಯಾನ ಸಚಿವಾಲಯ ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ. ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡರು ನೀಡಿದ ದೂರನ್ನು ಕೂಡ ಪೊಲೀಸರು ದಾಖಲಿಸಿಕೊಂಡಿದ್ದಾರೆ.
