ಕಮ್ಮಿ ಫಲಿತಾಂಶ ಬಂದ ಹೈಸ್ಕೂಲ್‌ ಶಿಕ್ಷಕರು ಬಚಾವ್‌

Teachers' salaries will not be hold
Highlights

 ಶಿಕ್ಷಕರ ಬೇಜವಾಬ್ದಾರಿಯಿಂದ ಮಕ್ಕಳ ಫಲಿತಾಂಶ ಕಡಿಮೆಯಾಗಿದ್ದಲ್ಲಿ ಸಂಬಂಧಪಟ್ಟಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಬೆಂಗಳೂರು :  ಕಳೆದ ಐದು ವರ್ಷಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಆಯಾ ಜಿಲ್ಲೆಯ ಸರಾಸರಿ ಫಲಿತಾಂಶಕ್ಕಿಂತ ಕಡಿಮೆ ಬಂದಂತಹ ಅನುದಾನಿತ ಪ್ರೌಢಶಾಲೆಗಳ ವೇತನ ತಡೆಹಿಡಿಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶ ಹಿಂಪಡೆದಿದ್ದು, ವೇತನ ತಡೆಹಿಡಿಯದಂತೆ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಿದೆ. ಒಂದು ವೇಳೆ ಶಿಕ್ಷಕರ ಬೇಜವಾಬ್ದಾರಿಯಿಂದ ಮಕ್ಕಳ ಫಲಿತಾಂಶ ಕಡಿಮೆಯಾಗಿದ್ದಲ್ಲಿ ಸಂಬಂಧಪಟ್ಟಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ತಿಳಿಸಿದೆ.

ಶಿಕ್ಷಣ ಸಚಿವರು ಜೂ.23ರಂದು ಸಭೆ ಕರೆದು ಶಿಕ್ಷಕರ ವೇತನ ತಡೆಹಿಡಿಯದಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವೇತನ ನೀಡಲಾಗುತ್ತಿದೆ. ಆದರೆ, ಫಲಿತಾಂಶ ಹಾಗೂ ಉತ್ತಮ ಶೈಕ್ಷಣಿಕ ಗುಣಮಟ್ಟಸುಧಾರಣೆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.

ಕ್ರಮಗಳು ಏನು?:  ಮಕ್ಕಳ ಗ್ರಹಿಕೆಗೆ ಪೂರಕವಾಗುವ ವಾತಾವರಣ, ಶಿಕ್ಷಕರ ಬೋಧನಾ ಸಾಮರ್ಥ್ಯದ ಗುರುತಿಸುವ ಕೆಲಸವನ್ನು ಸಮರ್ಪಕವಾಗಿ ಮಾಡಬೇಕಿದೆ. ವಿದ್ಯಾರ್ಥಿಗಳ ಗ್ರಹಿಕೆ ಯಾವ ವಿಷಯದಲ್ಲಿ ಮತ್ತು ಯಾವ ಹಂತದಲ್ಲಿ ವೈಫಲ್ಯವಾಗಿದೆ ಎಂಬ ಬಗ್ಗೆ ವಿಶ್ಲೇಷಿಸುವ ಕಾರ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮೂಹ ಸಮನ್ವಯ ಅಧಿಕಾರಿಗಳು ಮಾಡಬೇಕು.

2017-18ನೇ ಸಾಲಿನಲ್ಲಿ ರಾಜ್ಯ ಸಾಧನಾ ಸಮೀಕ್ಷೆ ನಡೆಸಲಾಗಿದ್ದು, ವರದಿ ಆಧರಿಸಿ ಕಡಿಮೆ ಫಲಿತಾಂಶವಿರುವ ಸರ್ಕಾರಿ, ಅನುದಾನಿತ ಶಿಕ್ಷಕರ ವಿವರಣೆ ಪಡೆಯಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಕಡಿಮೆ ಫಲಿತಾಂಶದ ಸಾಧನೆ ಮಾಡಿರುವ ಮಕ್ಕಳು, ಶಿಕ್ಷಕರಿಗೆ ಸಂಬಂಧಪಟ್ಟಡಯಟ್‌, ಬಿಆರ್‌ಸಿಗಳು ವಿಶೇಷ ಪ್ರಶಿಕ್ಷಣ ನೀಡಬೇಕು.

ಜಿಲ್ಲಾ ಉಪ ನಿರ್ದೇಶಕರು, ಜಿಲ್ಲಾ ಹಂತದಲ್ಲಿರುವ ವಿಷಯ ಪರಿವೀಕ್ಷಕರು, ಡಯಟ್‌ ಉಪನ್ಯಾಸಕರು ಮತ್ತು ಬಿಆರ್‌ಸಿ ಅವರಿಂದ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಬೇಕು. ವಿಶೇಷವಾಗಿ ಆಂಗ್ಲ, ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಬೋಧಿಸುವ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು. ಸಂಬಂಧಪಟ್ಟಶಾಲೆಗಳ ಮುಖ್ಯ ಶಿಕ್ಷಕರು ಪ್ರತಿ ತಿಂಗಳು ಎಸ್‌ಡಿಎಂಸಿ, ಪೋಷಕರ ಸಭೆ ಕರೆದು ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳನ್ನು ನಿರ್ವಹಿಸಬೇಕು. ಈ ಮೂಲಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಎಂ.ಟಿ. ರೇಜು ಸುತ್ತೋಲೆ ಹೊರಡಿಸಿದ್ದಾರೆ.

loader