Asianet Suvarna News Asianet Suvarna News

ಕಲ್ಲು, ಮಣ್ಣು ಹೊತ್ತು ಶಾಲೆ ಕಟ್ಟಿದ ಶಿಕ್ಷಕ!

ತಾವೇ ಕಲ್ಲು ಮತ್ತು ಮಣ್ಣು ಹೊತ್ತು ನಿರೀಕ್ಷೆಗಳನ್ನು ಮೀರಿ ಶಾಲೆ ಕಟ್ಟಿರುವ ಶಿಕ್ಷಕರೊಬ್ಬರು ಇಡೀ ಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೇದೇವರ ಗ್ರಾಮದ ಶ್ರೀಕಲ್ಮೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಂ.ಬಣಕಾರ ಅವರು ಇಂತಹ ಕಾರ್ಯ ಮಾಡಿದ ಮಹಾನ್ ಶಿಕ್ಷಕರಾಗಿದ್ದಾರೆ. 

Teacher Build School In Haveri
Author
Bengaluru, First Published Sep 5, 2018, 1:34 PM IST

ಮಲ್ಲಿಕಾರ್ಜುನ ಕರಿಯಪ್ಪನವರ

ಹುಬ್ಬಳ್ಳಿ: ಪ್ರಾಥಮಿಕ ಶಿಕ್ಷಣಕ್ಕೆ ಸೀಮಿತವಾಗಿದ್ದ, ಪ್ರೌಢ ಶಿಕ್ಷಣದಿಂದ ವಂಚಿತವಾಗಿದ್ದ ಗ್ರಾಮಕ್ಕೆ ತಾವೇ ಕಲ್ಲು ಮತ್ತು ಮಣ್ಣು ಹೊತ್ತು ನಿರೀಕ್ಷೆಗಳನ್ನು ಮೀರಿ ಶಾಲೆ ಕಟ್ಟಿರುವ ಶಿಕ್ಷಕರೊಬ್ಬರು ಇಡೀ ಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾಾರೆ. ಹಾವೇರಿ ಜಿಲ್ಲೆಯ ಬ್ಯಾಾಡಗಿ ತಾಲೂಕಿನ ಕಲ್ಲೇದೇವರ ಗ್ರಾಮದ ಶ್ರೀ ಕಲ್ಮೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಂ. ಬಣಕಾರ ಅವರ ಸಾಧನೆ ಕೇಳಿದರೆ ಎಂತವರೂ ನಿಬ್ಬೆರಗಾಗಿ ನಿಲ್ಲುತ್ತಾರೆ.

25 ವರ್ಷಗಳ ಹಿಂದೆ ಸಮರ್ಪಕ ಬಸ್ ಸೌಲಭ್ಯಗಳಿಂದ ವಂಚಿತವಾಗಿದ್ದ ಕಲ್ಲೇದೇವರ ಗ್ರಾಮದ ಹಲವು ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲೇ ತಮ್ಮ ವಿದ್ಯಾಭ್ಯಾಸ ಮೊಟಕು ಮಾಡಬೇಕಾದ ಅನಿವಾರ್ಯತೆ ಇತ್ತು. ಆಗ ಗ್ರಾಮಕ್ಕೆ ಪ್ರೌಢಶಾಲೆಯ ಅಗತ್ಯ ತೀವ್ರವಾಗಿತ್ತು. ಆದರೆ ಗ್ರಾಮದಲ್ಲಿ ಪ್ರೌಢಶಾಲೆ ಆರಂಭಿಸುವುದು ಬೇಡ ಎಂಬ ವರ್ಗವೂ ಇತ್ತು. ಇದಕ್ಕಾಗಿ ಅವರು ಒತ್ತಡ ಹೇರಿದ್ದರು. ಲಾಬಿ ಮಾಡಿದ್ದರು. ಈ ರಾಜಕೀಯದಿಂದ ಇಲ್ಲಿಯ ಮಕ್ಕಳು ಹೈಸ್ಕೂಲ್ ಶಿಕ್ಷಣದಿಂದ ವಂಚಿತರಾಗುತ್ತಿದ್ದ ಸಂದರ್ಭದಲ್ಲೇ ಆಗ ತಾನೆ ಸ್ನಾತಕೋತ್ತರ ವಿದ್ಯಾಭ್ಯಾಸ ಮುಗಿಸಿ ನೌಕರಿಗಾಗಿ ಅಲೆಯುತ್ತಿದ್ದ ಬಣಕಾರ ಗುರುಗಳು ಈ ಶಾಲೆಗೆ ಬಂದು ಈಗ ಸುತ್ತ ಹತ್ತು ಹಳ್ಳಿಗೆ ಮಾದರಿಯಾಗುವಂತಹ ಶಾಲೆಯನ್ನು ಕಟ್ಟಿದ್ದು, ಬಂದವರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಜಾಗ ಗಿಟ್ಟಿಸುವಲ್ಲಿ ಯಶಸ್ಸು: 

ಮೊದಲು ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನಕ್ಕೆಂದು ಕಟ್ಟಿದ್ದ ಎರಡು ಕೊಠಡಿಗಳಲ್ಲೇ ಈ ಶಾಲೆಯನ್ನು ಆರಂಭಿಸಲಾಗಿತ್ತು. ಊರಿನ ಮಧ್ಯದಲ್ಲಿ ಇದ್ದ ಕಾರಣ ಮಕ್ಕಳಿಗೆ ಪಾಠ ಕೇಳಲು ತೀವ್ರ ಕಿರಿಕಿರಿಯಾಗಿ ಪರಿಣಮಿಸಿತ್ತು. ಅಲ್ಲದೆ, ಊರಿಗೆ ಶಾಲೆಯೇ ಬೇಡ ಎಂದವರಿಗೆ ಅಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವುದು ಬೇಡವಾಗಿತ್ತು. ಹಲವಾರು ಶಿಕ್ಷಕರು ಈ ಸಾಲೆಯ ಉಸಾಬರಿಯೇ ಬೇಡ ಎಂದು ನೌಕರಿ ಬಿಟ್ಟು ಹೋದರು. ಆದರೆ, ಬಣಕಾರ್ ಶಿಕ್ಷಕರು ಮಾತ್ರ ಹಾಗೆ ಮಾಡಲಿಲ್ಲ. ಅದೇ ಊರಿನಲ್ಲಿದ್ದ ಕೆಲ ಶಿಕ್ಷಣ ಪ್ರೇಮಿಗಳನ್ನು ಹುಡುಕಿ ಶಾಲೆಗೆ ಜಾಗ ದಾನ ನೀಡುವಂತೆ ಬೇಡಿಕೊಂಡರು. ಊರಿನ ಜಮೀನ್ದಾರರಾದ ಬಸವಣ್ಣೆಪ್ಪ ಹೂಗಾರ ಅವರ ಮನಸ್ಸು ಗೆದ್ದು ಅವರಿಂದ ಶಾಲೆಗೆ 3.5 ಎಕರೆ ಜಾಗವನ್ನು ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು.

ನೆರವಿಗಾಗಿ ಹಳ್ಳಿ ಹಳ್ಳಿಗೆ ಅಲೆದಾಟ: 

ಶಾಲೆಗೆ ಜಾಗವೇನೋ ಸಿಕ್ಕಿತು. ಆದರೆ ಮುಂದೆ ಕಟ್ಟಡ ಕಟ್ಟುವುದು ಬಣಕಾರ್ ಗುರುಗಳಿಗೆ ಸವಾಲಾಗಿತ್ತು. ಬಡವರೇ ಹೆಚ್ಚಾಗಿದ್ದರಿಂದ ನೆರವು ಸಿಗುವುದು ಅಸಾಧ್ಯವಾಗಿತ್ತು. ಆದರೂ ಛಲ ಬಿಡದೇ ಇಡೀ ಊರಿನ ಮಂದಿ ಎದುರಿಗೆ ಸಮಸ್ಯೆಯನ್ನು ಹೇಳಿಕೊಂಡರು. ಸಾಧ್ಯವಾದಷ್ಟು ದಾನ ನೀಡಲು ಹೇಳಿದರು. ಆಗಿನ ಕಾಲದಲ್ಲಿ ₹50ರಿಂದ ₹1000 ಹಣವನ್ನು ಊರಿನ ನಾಗರಿಕರು ಮತ್ತು ಸುತ್ತಮುತ್ತಲ ಗ್ರಾಮಗಳ ಕೆಲ ಶಿಕ್ಷಣ ಪ್ರೇಮಿಗಳು ನೀಡಿದರು. ಜನರು ನೀಡಿದ ಹಣವನ್ನೇ ಜೋಡಿಸಿಕೊಂಡು ಮೊದಲು ಮೂರು ಪುಟ್ಟ ಕೊಠಡಿಗಳನ್ನು ನಿರ್ಮಿಸಿ ಶಾಲೆಯನ್ನು ಆರಂಭಿಸಿದ ಬಣಕಾರ ಶಿಕ್ಷಕರ ಸಾಹಸ ನೋಡಿದ ಕೆಲವರು ತಾವೇ ಸಹಾಯ ಮಾಡಲು ಮುಂದೆ ಬಂದರು. ಫಲವಾಗಿ ಸಸ್ಯೋದ್ಯಾನದ ನಡುವೆ ಸುಂದರ ಪ್ರೌಢಶಾಲೆ ಕಂಗೊಳಿಸುತ್ತಿದೆ.

ಕಲ್ಲುಮಣ್ಣು ಹೊತ್ತ ಶಿಕ್ಷಕರ ಸಾಹಸ !

ದಿಟ್ಟ ಸಾಹಸ ಮಾಡಿ ಶಾಲೆ ಕಟ್ಟಲು ಆರಂಭಿಸಿದ ಬಣಕಾರ್ ಮಾಸ್ತರ್ ಜತೆ ಇದ್ದ ಶಿಕ್ಷಕರು ಮತ್ತು ವಿದ್ಯಾಾರ್ಥಿಗಳು ಸಾಥ್ ನೀಡಿದರು. ಮಾಸ್ತರ್‌ಗಳೆಲ್ಲ ಸೇರಿಕೊಂಡು ಗುದ್ದಲಿ ಹಿಡಿದು ಪಾಯ ತೆಗೆದರು. ಗ್ರಾಮಗಳಲ್ಲಿ ಟ್ರ್ಯಾಕ್ಟರ್ ಇದ್ದವರ ಬಳಿ ಹೋಗಿ ಕಡಿಮೆ ಬಾಡಿಗೆಗೆ ಪಡೆದು ತಾವೇ ಕಲ್ಲು ಮತ್ತು ಮಣ್ಣು ಹೇರಿಕೊಂಡು ಬಂದರು. ಅಬ್ಬಾ! ಆಗಿನ ಪರಿಸ್ಥಿತಿಯನ್ನು ನೆನೆಸಿಕೊಂಡರೆ, ನಾವೇ ಈ ಶಾಲೆಯನ್ನು ಕಟ್ಟಿದ್ದಾ? ಎನಿಸುತ್ತಿದೆ ಎಂದು ಬಣಕಾರ್ ಮಾಸ್ತರ್‌ಗೆ ಸಾಥ್ ನೀಡಿದ ಸಹದ್ಯೋಗಿಗಳಾದ ಜಿ.ಎಚ್. ಗೌಡರ್, ಸಿ.ಎನ್. ಹೊನ್ನಪ್ಪನವರ, ಡಿ.ಕೆ. ಕಿತ್ತೂರ, ಸಿ.ಎಂ. ತಂಗೌಡ ಮಾಸ್ತರ್, ಸುರೇಖಾ ನಡುವಿನಮಠ ಸೇರಿದಂತೆ ಶಾಲೆಯ ಇತರ ಸಿಬ್ಬಂದಿ ಅಶ್ಚರ್ಯ ವ್ಯಕ್ತಪಡಿಸುತ್ತಾಾರೆ.

ಈಗ ಊರಿಗೇ ಕಾಡುತ್ತಿದೆ ಬೇಸರ:

ಇಷ್ಟೆಲ್ಲ ಸಾಧನೆ ಮಾಡಿದ ನಂತರ ಈಗ ಯಾವುದೇ ಸರ್ಕಾರಿ ಶಾಲೆಗೂ ಕಡಿಮೆ ಇಲ್ಲದ ಮೂಲ ಸೌಕರ್ಯಗಳನ್ನೊಳಗೊಂಡು ಬೆಳೆದು ನಿಂತಿರುವ ಶಾಲೆಯಲ್ಲಿ ಕಲಿತ ಮಕ್ಕಳು ಎಂಜಿನಿಯರ್, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಬೆಳೆದು ನಿಂತಿದ್ದಾರೆ. ಹೀಗಿದ್ದರೂ ಶಾಲೆಗೊಂದು ಬೇಸರ ಕಾಡಿದೆ. ಕಾರಣ ಬಣಕಾರ್ ಮಾಸ್ತರ್ ಈಗ ನಿವೃತ್ತಿ ಹೊಂದುತ್ತಿದ್ದಾರೆ. ಹೀಗಾಗಿ ಶಾಲಾ ಸಿಬ್ಬಂದಿ ಸೇರಿದಂತೆ ಇಡೀ ಊರಿಗೆ ಬೇಸರ ಕಾಡುತ್ತಿದೆ.

Follow Us:
Download App:
  • android
  • ios