ತೆಲುಗು ದೇಶಂ ಪಕ್ಷದ (ಟಿಡಿಪಿ) ಶಾಸಕನೊಬ್ಬನ ಭ್ರಷ್ಟಾಚಾರವನ್ನು ಬಯಲಿಗೆಳೆದ ಪತ್ರಕರ್ತನ ಮೇಲೆ ಶಾಸಕನ ಸಹೋದರ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ನವದೆಹಲಿ (ಫೆ.06): ತೆಲುಗು ದೇಶಂ ಪಕ್ಷದ (ಟಿಡಿಪಿ) ಶಾಸಕನೊಬ್ಬನ ಭ್ರಷ್ಟಾಚಾರವನ್ನು ಬಯಲಿಗೆಳೆದ ಪತ್ರಕರ್ತನ ಮೇಲೆ ಶಾಸಕನ ಸಹೋದರ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ತೆಲುಗು ಸುದ್ಧಿಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಎಂ. ನಾಗಾರ್ಜುನ ರೆಡ್ಡಿ ಎನ್ನುವ ಪತ್ರಕರ್ತನ ಮೇಲೆ ಶಾಸಕ ಆಮಂಚಿ ಕೃಷ್ಣ ಮೋಹನ್ ಸಹೋದರ ಸ್ವಾಮುಲು ಹಾಗೂ ಅವರ ಬೆಂಬಲಿಗರು ಪ್ರಕಾಸಂ ಜಿಲ್ಲೆಯ ಚಿರಾಲ ಪೊಲೀಸ್ ಸ್ಟೇಷನ್ ಬಳಿ ಭಾನುವಾರ ಹಲ್ಲೆ ನಡೆಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ತಡವಾಗಿ ಸೋಮವಾರ ಬೆಳಕಿಗೆ ಬಂದಿದೆ.
ಪತ್ರಕರ್ತ ಎಂ. ನಾಗಾರ್ಜುನ ರೆಡ್ಡಿ ಮಗನ ಜೊತೆ ಬೈಕಲ್ಲಿ ಬರುತ್ತಿರುವಾಗ ಸ್ವಾಮುಲು ಹಾಗೂ ಅವನ ಬೆಂಬಲಿಗರು ಬೈಕಿನಿಂದ ತಳ್ಳಿದ್ದಾರೆ. ರಸ್ತೆಯಿಡಿ ಅಟ್ಟಾಡಿಸಿಕೊಂಡು ಕೋಲಿನಿಂದ ಹೊಡೆದಿದ್ದಾರೆ. ಜನರು ಅಸಹಾಯಕರಾಗಿ ಈ ದೃಶ್ಯವನ್ನು ನೋಡುತ್ತಿದ್ದು, ನಾಗಾರ್ಜುನ ನೆರವಿಗೆ ಯಾರೊಬ್ಬರೂ ಬಂದಿಲ್ಲ. ತೀವ್ರ ಗಾಯಗಳಾಗಿ ರಕ್ತಸ್ರಾವದಿಂದ ನರಳುತ್ತಿದ್ದ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಸ್ವಾಮುಲು ಮತ್ತು ಇತರರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಇದುವರೆಗೂ ಯಾರೊಬ್ಬರನ್ನು ಬಂಧಿಸಿಲ್ಲ.
ನಾಗಾರ್ಜುನ ರೆಡ್ಡಿ ನನ್ನ ಜಾತಿ ಹೆಸರಿನಿಂದ ನನ್ನನ್ನು ನಿಂದಿಸುತ್ತಿದ್ದ ಎಂದು ಆರೋಪಿಸಿ ಸ್ವಾಮುಲು ದೂರು ನೀಡಿದ್ದಾನೆ. ಎಸ್ ಎಸ್ಟಿ ಕಾಯ್ದೆಯಡಿ ನಾಗಾರ್ಜುನನ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಶಾಸಕ ಆಮಂಚಿ ಕೃಷ್ಣ ಮೋಹನ್ ಬಗ್ಗೆ ಭ್ರಷ್ಟಾಚಾರದ ಕುರಿತು ಪತ್ರಿಕೆಯಲ್ಲಿ ಬರೆದಿದ್ದಕ್ಕಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಾಗಾರ್ಜುನ ದೂರು ನೀಡಿದ್ದಾರೆ.
