ಬೆಂಗಳೂರು :  ಕೆಲ ದಿನಗಳ ಹಿಂದಷ್ಟೆಅಕ್ರಮ ಭೂ ಪ್ರಕರಣಗಳಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿ ಬಳಿಕ ಜಾಮೀನು ಪಡೆದು ಹೊರಬಂದಿದ್ದ ಜೆಡಿಎಸ್‌ ಮುಖಂಡ ಪ್ರಭಾಕರ ರೆಡ್ಡಿ, ಆದಾಯ ತೆರಿಗೆ ವಂಚನೆ ಆರೋಪದಡಿ ಮತ್ತೆ ಬುಧವಾರ ಕಾರಾಗೃಹ ಸೇರಿದ್ದಾರೆ.

ನ್ಯಾಯಾಲಯದ ವಾರೆಂಟ್‌ ಮೇರೆಗೆ ಪ್ರಭಾಕರ ರೆಡ್ಡಿ ಅವರನ್ನು ಪೊಲೀಸ್‌ ಆಯುಕ್ತರ ಕಚೇರಿ ಸಮೀಪದಲ್ಲೇ ಮಧ್ಯಾಹ್ನ ಬಂಧಿಸಿದ ಹೈಗ್ರೌಂಡ್ಸ್‌ ಠಾಣೆ ಪೊಲೀಸರು, ಆರ್ಥಿಕ ಅಪರಾಧ ನ್ಯಾಯಾಲಯದ ಮುಂದೆ ಸಂಜೆ ಹಾಜರು ಪಡಿಸಿದರು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

2014ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಹಾಗೂ 2018ರಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಂದ ಜೆಡಿಎಸ್‌ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಪ್ರಭಾಕರ್‌ ರೆಡ್ಡಿ, ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸಿದ್ದರು. ಈ ಆಸ್ತಿ ವಿವರದ ದಾಖಲೆಗಳನ್ನು ಪರಿಶೀಲಿಸಿದಾಗ ಅವರು 5.3 ಕೋಟಿ ರು. ತೆರಿಗೆ ವಂಚಿಸಿರುವ ಸಂಗತಿ ಬೆಳಕಿಗೆ ಬಂದಿತ್ತು. ಅನಂತರ ರೆಡ್ಡಿ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಲಾಯಿತು. ಬಳಿಕ ಬಾಕಿ ತೆರಿಗೆ ಪಾವತಿಗೆ ರೆಡ್ಡಿ ಅವರಿಗೆ ನೋಟಿಸ್‌ ನೀಡಲಾಗಿತ್ತು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಾರದ ರೆಡ್ಡಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಆದಾಯ ತೆರಿಗೆ ಇಲಾಖೆ (ಐಟಿ) ಹೇಳಿದೆ.

ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು, ರೆಡ್ಡಿಯನ್ನು ಬಂಧಿಸಿ ತನ್ನ ಮುಂದೆ ಹಾಜರುಪಡಿಸುವಂತೆ ಮಂಗಳವಾರ ಹೈಗ್ರೌಂಡ್ಸ್‌ ಠಾಣೆ ಪೊಲೀಸರಿಗೆ ವಾರೆಂಟ್‌ ಜಾರಿಗೊಳಿಸಿತು. ಅದರಂತೆ ಕಾರ್ಯಾಚರಣೆಗಿಳಿದ ಪೊಲೀಸರು, ಅಕ್ರಮ ಭೂ ಪ್ರಕರಣಗಳ ಸಂಬಂಧ ಬುಧವಾರ ಆಯುಕ್ತರ ಕಚೇರಿಯಲ್ಲಿ ಸಿಸಿಬಿ ಡಿಸಿಪಿ ಎಸ್‌.ಗಿರೀಶ್‌ ಮುಂದೆ ರೆಡ್ಡಿ ವಿಚಾರಣೆಗೆ ಹಾಜರಾಗುವ ಮಾಹಿತಿ ಸಿಕ್ಕಿತು. ಕೊನೆಗೆ ಸಿಸಿಬಿ ವಿಚಾರಣೆ ಮುಗಿಸಿ ತೆರಳುವಾಗ ಆಲಿ ಆಸ್ಕರ್‌ ರಸ್ತೆಯಲ್ಲಿ ಆರೋಪಿಯನ್ನು ಬಂಧಿಸಲಾಯಿತು. ಇನ್ನು ತೆರಿಗೆ ವಂಚನೆ ಸಂಬಂಧ ಐಟಿ ತನಿಖೆ ಮುಂದುವರೆಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ರಮ ಭೂ ಪ್ರಕರಣ ಸಂಬಂಧ ಫೆ.22 ರಂದು ಪ್ರಭಾಕರ ರೆಡ್ಡಿಯನ್ನು ಸಿಸಿಬಿ ಬಂಧಿಸಿತು.