ಹೆಚ್ಚುತ್ತಿರುವ ಮೊಬೈಲ್ ಕಳವು ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ಕೇಂದ್ರ ಸರ್ಕಾರ, ಪ್ರತಿ ಮೊಬೈಲ್ ಫೋನ್'ಗೂ ಇರುವ 15 ಅಂಕೆಗಳ ವಿಶಿಷ್ಟ ‘ಐಎಂಇಐ ಸಂಖ್ಯೆ’ ತಿರುಚುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದೆ. ಅಂತಹ ಕೃತ್ಯ ಎಸಗಿದವರಿಗೆ 3 ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಿದೆ.
ನವದೆಹಲಿ(ಸೆ.25): ಹೆಚ್ಚುತ್ತಿರುವ ಮೊಬೈಲ್ ಕಳವು ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ಕೇಂದ್ರ ಸರ್ಕಾರ, ಪ್ರತಿ ಮೊಬೈಲ್ ಫೋನ್'ಗೂ ಇರುವ 15 ಅಂಕೆಗಳ ವಿಶಿಷ್ಟ ‘ಐಎಂಇಐ ಸಂಖ್ಯೆ’ ತಿರುಚುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದೆ. ಅಂತಹ ಕೃತ್ಯ ಎಸಗಿದವರಿಗೆ 3 ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಿದೆ.
ಮೊಬೈಲ್ ಕಳ್ಳತನ ಮಾಡಿದ ಬಳಿಕ ಖದೀಮರು ಅದರ ಐಎಂಇಐ ಸಂಖ್ಯೆಯನ್ನು ತಿರುಚುವ ಮೂಲಕ ಆ ಮೊಬೈಲ್ ಫೋನ್ ಮೇಲೆ ತನಿಖಾ ಸಂಸ್ಥೆಗಳು ನಿಗಾ ಇಡದಂತೆ ಮಾಡುತ್ತಿದ್ದಾರೆ. ಅಂಥ ವರನ್ನು ಮಟ್ಟ ಹಾಕುವ ಉದ್ದೇಶದಿಂದ ದೂರ ಸಂಪರ್ಕ ಇಲಾಖೆ ಆ.25ರಂದು ಅಧಿಸೂಚನೆ ಯೊಂದನ್ನು ಹೊರಡಿಸಿದೆ. ಮೊಬೈಲ್ ತಯಾರಕರನ್ನು ಹೊರತುಪಡಿಸಿ ಯಾವುದೇ ವ್ಯಕ್ತಿ ಐಎಂಇಐ ಸಂಖ್ಯೆಯನ್ನು ಅಳಿಸುವುದು, ನಾಶಪಡಿಸುವುದು, ಬದಲಾವಣೆ ಮಾಡುವುದು ಅಕ್ರಮ ಎಂದು ಆ ಅಧಿಸೂಚನೆ ಹೇಳುತ್ತದೆ.
ಐಎಂಇಐ ಸಂಖ್ಯೆ ಅಕ್ರಮವಾಗಿ ತಿರುಚಲ್ಪಟ್ಟಿರುವುದು ಗೊತ್ತಿದ್ದರೆ ಯಾವುದೇ ವ್ಯಕ್ತಿ ಅಂತಹ ಮೊಬೈಲ್ ಬಳಸಕೂಡದು ಎಂದು ‘ಮೊಬೈಲ್ ಉಪಕರಣದ ಗುರುತಿನ ಸಂಖ್ಯೆ ತಿರುಚುವುದನ್ನು ತಡೆಯುವ ನಿಯಮ- 2017’ ಹೇಳುತ್ತದೆ. ಸಿಮ್ ಬದಲಾವಣೆ ಮಾಡುವ ಮೂಲಕ ಮೊಬೈಲ್ ಸಂಖ್ಯೆ ಬದಲಿಸಬಹುದು. ಆದರೆ ಐಎಂಇಐ ಸಂಖ್ಯೆಯನ್ನು ತಂತ್ರಜ್ಞಾನದಲ್ಲಿ ನಿಪುಣನಾದ ವ್ಯಕ್ತಿ ವಿಶೇಷ ಉಪಕರಣಗಳಿಂದ ಮಾತ್ರ ಬದಲಿಸಬಹುದು.
ಪ್ರತಿ ಮೊಬೈಲ್ ಉಪಕರಣಕ್ಕೂ ಜಿಎಸ್‌ಎಂಎ ಎಂಬ ಜಾಗತಿಕ ಸಂಸ್ಥೆ ಹಾಗೂ ಅದರಿಂದ ಮಾನ್ಯತೆ ಪಡೆದ ಸಂಸ್ಥೆಗಳು ಐಎಂಇಐ ಸಂಖ್ಯೆಯನ್ನು ಮಂಜೂರು ಮಾಡುತ್ತವೆ. ಒಂದು ವೇಳೆ ಮೊಬೈಲ್ ಕಳೆದು ಹೋದರೆ, ಅದನ್ನು ಪತ್ತೆ ಹಚ್ಚಲು ಈ ಸಂಖ್ಯೆ ಅತ್ಯವಶ್ಯಕ. ಆದರೆ ಖದೀಮರು ಆ ಸಂಖ್ಯೆಯನ್ನೇ ತಿರುಚಿ, ಬೇರೊಂದು ಸಂಖ್ಯೆಯನ್ನು ನಿಗದಿ ಮಾಡಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇದರಿಂದ ಕಳ ವಾದ ಮೊಬೈಲ್ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಒಂದೇ ಐಎಂಇಐ ಸಂಖ್ಯೆ ಹೊಂದಿದ 15 ಸಾವಿರ ಮೊಬೈಲ್‌ಗಳು ಕಾರ್ಯನಿರ್ವಹಿಸುತ್ತಿರುವ ಮಾಹಿತಿಯನ್ನು ದೂರಸಂಪರ್ಕ ಜಾರಿ ಸಂಪನ್ಮೂಲ ಹಾಗೂ ನಿಗಾ ಕೋಶ ಪತ್ತೆ ಹಚ್ಚಿದೆ.
ಇದೇ ವೇಳೆ, ಕಳುವಾದ ಅಥವಾ ಕಳೆದುಹೋದ ಮೊಬೈಲ್ ಫೋನ್'ಗಳ ಸಿಮ್ ಕಾರ್ಡ್ ತೆಗೆಯುತ್ತಿದ್ದಂತೆ ಅಥವಾ ಐಎಂಇಐ ಸಂಖ್ಯೆ ಬದಲಿಸುತ್ತಿದ್ದಂತೆ ಅದನ್ನು ನಿಷ್ಕ್ರಿಯಗೊಳಿಸುವ ವ್ಯವಸ್ಥೆಯೊಂದನ್ನು ಜಾರಿಗೆ ತರುವ ನಿಟ್ಟಿನಲ್ಲಿ ದೂರಸಂಪರ್ಕ ಇಲಾಖೆ ಕಾರ್ಯೋನ್ಮುಖವಾಗಿದೆ
ಏನಿದು ಐಎಂಇಐ?: ಪ್ರತಿ ಮೊಬೈಲ್ ಫೋನ್ ಕೂಡ ಹೊಂದಿರುವ 15 ಅಂಕೆಗಳ ವಿಶಿಷ್ಟ ಸಂಖ್ಯೆ. ಮೊಬೈಲ್ ಹೊಂದಿರುವ ವ್ಯಕ್ತಿ ಯಾವಾಗ ಕರೆ ಮಾಡಿದರೂ, ಫೋನ್ ನಂಬರ್ ಜತೆಗೆ ಐಎಂಇಐ ಸಂಖ್ಯೆಯನ್ನೂ ಕಾಲ್ ರೆಕಾರ್ಡ್ ತೋರಿಸುತ್ತದೆ.
