ಚೆನ್ನೈ[ಆ.24]: ಲಷ್ಕರ್‌ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಆರು ಮಂದಿ ಉಗ್ರರು ತಮಿಳುನಾಡಿನ ಒಳಕ್ಕೆ ನುಸುಳಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಕೇರಳದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಆರು ಉಗ್ರರ ಪೈಕಿ ಒಬ್ಬ ಪಾಕಿಸ್ತಾನ ಮೂಲದವನು ಹಾಗೂ ಇತರ 5 ಮಂದಿ ಶ್ರೀಲಂಕಾದ ತಮಿಳು ಮುಸ್ಲಿಮರು ಎನ್ನಲಾಗಿದೆ.

ಲಷ್ಕರ್‌ ಉಗ್ರರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಡಗಿದ್ದಾರೆ ಎನ್ನಲಾಗಿದ್ದು, ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಪಾಕಿಸ್ತಾನ ಪ್ರಜೆಯನ್ನು ಇಲ್ಯಾಸ್‌ ಅನ್ವರ್‌ ಎಂದು ಗುರುತಿಸಲಾಗಿದೆ. ಹಿಂದುಗಳ ವೇಷದಲ್ಲಿ ಹಣೆಗೆ ತಿಲಕ/ವಿಭೂತಿ ಹಚ್ಚಿಕೊಂಡು ಬಂದು ಇವರು ದಾಳಿ ನಡೆಸಬಹುದು ಎಂದು ಎಚ್ಚರಿಕೆ ಸಂದೇಶ ಮೊಳಗಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕೊಯಮತ್ತೂರಿನಲ್ಲಿ 2000 ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸೇನೆ ಹಾಗೂ ವಾಯುಪಡೆಗೂ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದೆಡೆ ರಾಜಧಾನಿ ಚೆನ್ನೈನಲ್ಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಹೋಟೆಲ್‌, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಪಿಂಗ್‌ ಮಾಲ್‌ಗಳು ಹಾಗೂ ದೇವಾಲಯಗಳಲ್ಲಿ ಪೊಲೀಸ್‌ ಕಣ್ಗಾವಲು ಇರಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ 10 ಸದಸ್ಯರ ಕ್ಷಿಪ್ರ ಕಾರ್ಯ ಪಡೆಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ಚೆನ್ನೈ ಪೊಲೀಸ್‌ ಆಯುಕ್ತ ಎ.ಕೆ. ವಿಶ್ವನಾಥನ್‌ ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳಿನಲ್ಲಿ ರಾಷ್ಟ್ರೀಯ ತನಿಖಾ ದಳ ತಮಿಳುನಾಡಿನಲ್ಲಿ ಐಸಿಸ್‌ ಜೊತೆ ಸಂಪರ್ಕ ಇಟ್ಟುಕೊಂಡಿರುವ 10 ಮಂದಿ ಶಂಕಿತ ಉಗ್ರರರನ್ನು ಬಂಧಿಸಿದೆ. ರಾಜ್ಯದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿರುವ ಸಂಗತಿ ತನಿಖೆಯ ವೇಳೆ ಬಹಿರಂಗಗೊಂಡಿತ್ತು.

ಕೇರಳದಲ್ಲೂ ಹೈ ಅಲರ್ಟ್‌:

ಇದೇ ವೇಳೆ ತಮಿಳುನಾಡಿನಲ್ಲಿ ಉಗ್ರರು ನುಸುಳಿರುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಕೇರಳದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದೆಲ್ಲಡೆ ಕಣ್ಗಾವಲು ಇಡುವಂತೆ ಜಿಲ್ಲಾ ಪೊಲೀಸ್‌ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಲೋಕನಾಥ್‌ ಬೆಹೆರಾ ತಿಳಿಸಿದ್ದಾರೆ.