ಚೆನ್ನೈ(ಡಿ.4): ತಮಿಳುನಾಡು ಸಿಎಂ ಜಯಾಲಲಿತಾ ಅವರಿಗೆ  ಇಂದು ಸಂಜೆ ಆಸ್ಪತ್ರೆಯಲ್ಲಿದ್ದಾಗಲೇ ಹೃದಯಾಘಾತವಾಗಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ತಜ್ಞ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ. ಈ ಬಗ್ಗೆ ಚೆನ್ನೈ ಅಪೋಲೋ ಆಸ್ಪತ್ರೆ ವೈದ್ಯರು ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದಾರೆ.

ಸೆ.​22ರಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಜಯಾಗೆ ಚಿಕಿತ್ಸೆ ನೀಡಲಾಗಿತ್ತು. ಅಪೋಲೋ ಆಸ್ಪತ್ರೆ ಹಾಗೂ ಲಂಡನ್, ಸಿಂಗಾಪುರದ ತಜ್ಞ ವೈದ್ಯರಿಂದ ಸಹ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಜಯ ಅವರಿಗೆ ವೆಂಟಿಲೇಟರ್ ಅಳವಡಿಸಿ ತುರ್ತು ನಿಗಾ ಘಟಕಕ್ಕೆ ಸೇರಿಸಲಾಗಿದೆ. ಆಸ್ಪತ್ರೆಗೆ ದೌಡಾಯಿಸಿದ ಆಪ್ತರು ಹಾಗೂ ಕಾರ್ಯಕರ್ತರು. ಕೆಲವೇ ಕ್ಷಣಗಳಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೂಚನೆ ಮೇರೆಗೆ  ರಾಜ್ಯಪಾಲರಾದ ವಿದ್ಯಾ ಸಾಗರ್ ರಾವ್  ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಆಸ್ಪತ್ರೆಯ 2.ಕಿ.ಮೀ ಸುತ್ತಮುತ್ತ ನಿಷೇಧಾಜ್ಞೆ ಹೊರಡಿಸಲಾಗಿದೆ.

ದೇಗುಲಗಳಲ್ಲಿ ಪೂಜೆ, ಸಚಿವರು, ಮುಖಂಡರ ಆಗಮನ

ಜಯಲಲಿತಾಗೆ ಹೃದಯಾಘಾತವಾಗಿರುವ ಸುದ್ದಿ ಕೇಳಿ ಆಘಾತಗೊಂಡಿರುವ ಅಭಿಮಾನಿಗಳು ಹಾಗೂ ಎಡಿಎಂಕೆ ಕಾರ್ಯಕರ್ತರು ರಾಜ್ಯದಾದ್ಯಂತವಿರುವ ದೇಗುಲಗಳಲ್ಲಿ ಜಯಾರ ಕ್ಷೇಮಕ್ಕಾಗಿ ಅವರ ಹೆಸರಿನಲ್ಲಿ ವಿಶೇಷ ಪೂಜೆ, ಪಾರ್ಥನೆ ಸಲ್ಲಿಸುತ್ತಿದ್ದಾರೆ. ಅಪೋಲೋ ಆಸ್ಪತ್ರೆಗೆ ಸಚಿವರು, ಮುಖಂಡರು ದೌಡಾಯಿಸಿದ್ದಾರೆ.

ಚೆನ್ನೈನಲ್ಲಿ ಟೀವಿ,ಕೇಬಲ್ ಬಂದ್, ಅರೆಸೇನಾ ಪಡೆ ಆಗಮನ

ಜಯಲಲಿತಾ ಅವರ ಆರೋಗ್ಯ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಎಲ್ಲಡೆಯಿಂದಲೂ ಜನತೆ ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಎಲ್ಲಡೆ ವಿವಿಧ ರೀತಿಯಲ್ಲಿ ವಿಷಯ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಚೆನ್ನೈ ಹಾಗೂ ಪ್ರಮುಖ ನಗರಗಳಲ್ಲಿ ಟೀವಿ,ಕೇಬಲ್ ಬಂದ್ ಮಾಡಲಾಗಿದೆ. ಸ್ವತಃ ಚೆನ್ನೈ ಪೊಲೀಸ್ ಮಹಾನಿರ್ದೇಶಕರು ಅಪೋಲೋ ಆಸ್ಪತ್ರೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೇಂದ್ರದಿಂದ ಅರೆ ಸೇನಾ ಪಡೆ ಸಹ ಚೆನ್ನೈಗೆ ಆಗಮಿಸಲಿದೆ.