ಚೆನ್ನೈ [ಜು.14] : ಭಾರತದಲ್ಲಿ ಇಸ್ಲಾಮಿಕ್‌ ಆಡಳಿತದ ಉದ್ದೇಶದೊಂದಿಗೆ ದೇಶಾದ್ಯಂತ ಭಯೋತ್ಪಾದನಾ ದಾಳಿ ನಡೆಸಲು ನಡೆದಿದ್ದ ಸಂಚೊಂದನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಯಲಿಗೆಳೆದಿದೆ. ತಮಿಳುನಾಡಿನ ವಿವಿಧ ಪ್ರದೇಶಗಳ ಮೇಲೆ ಈ ಸಂಬಂಧ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು, ಉಗ್ರ ದಾಳಿಯ ಸಂಚಿನ ಆರೋಪದ ಮೇಲೆ ಮೂವರನ್ನು ವಶಕ್ಕೆ ಪಡೆದಿದ್ದು, ಅವರಿಂದ ದಾಳಿ ಸಂಬಂಧಿತ ವಸ್ತುಗಳನ್ನು ವಶಪಡಿಸಿಕೊಂಡಿದೆ.

ತಮಿಳುನಾಡಿನ ಮೂವರು ಶಂಕಿತ ಉಗ್ರರು, ದೇಶದ ಇತರೆ ಕೆಲ ಪ್ರದೇಶಗಳಲ್ಲಿರುವ ವ್ಯಕ್ತಿಗಳ ಜೊತೆ ಸೇರಿಕೊಂಡು ಭಾರೀ ಭಯೋತ್ಪಾದನಾ ದಾಳಿಗೆ ಸಂಚು ರೂಪಿಸಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಜುಲೈ 9ರಂದೇ ಪ್ರಕರಣ ದಾಖಲಿಸಿಕೊಂಡಿದ್ದರು. ಇದೇ ಪ್ರಕರಣ ಸಂಬಂಧ ಶನಿವಾರ ಚೆನ್ನೈ ಮತ್ತು ನಾಗಪಟ್ಟಿಣಂ ಜಿಲ್ಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಸಯ್ಯದ್‌ ಬುಖಾರಿ, ಹಸನ್‌ ಅಲಿ ಮತ್ತು ಮೊಹಮ್ಮದ್‌ ಯೂಸುಫುದ್ದೀನ್‌ ಹರೀಶ್‌ ಮೊಹಮ್ಮದ್‌ ಎಂಬ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ದಾಳಿ ವೇಳೆ ಶಂಕಿತ ಉಗ್ರರ ಬಳಿಯಿಂದ 9 ಮೊಬೈಲ್‌ ಫೋನ್‌, 15 ಸಿಮ್‌ ಕಾರ್ಡ್‌, 7 ಮೆಮೊರಿ ಕಾರ್ಡ್‌, 5 ಹಾರ್ಡ್‌ಡಿಸ್ಕ್‌, 6 ಪೆನ್‌ಡ್ರೈವ್‌, 2 ಟ್ಯಾಬ್ಲೆಟ್‌, ನಿಯತಕಾಲಿಕೆಗಳು, ಬ್ಯಾನರ್‌, ಪೋಸ್ಟರ್‌ ಹಾಗೂ ಪುಸ್ತಕ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಇನ್ನಷ್ಟುವಿಚಾರಣೆಗೆ ಗುರಿಪಡಿಸಿದ ಬಳಿಕ ಬಂಧಿಸುವ ಸಾಧ್ಯತೆ ಇದೆ.

ಶಂಕಿತ ಉಗ್ರರು, ‘ಅನ್ಸಾರುಲ್ಲಾ’ ಎಂಬ ಸಂಘಟನೆ ಸ್ಥಾಪಿಸಿಕೊಂಡು ಭಾರತದಲ್ಲಿ ಇಸ್ಲಾಂ ಆಡಳಿತವನ್ನು ಸ್ಥಾಪಿಸುವ ಉದ್ದೇಶದೊಂದಿಗೆ ದೇಶದೆಲ್ಲೆಡೆ ಭಯೋತ್ಪಾದಕ ದಾಳಿ ನಡೆಸಲು ಉದ್ದೇಶಿಸಿದ್ದರು. ಇದಕ್ಕಾಗಿ ಅವರು ಈಗಾಗಲೇ ಹಣ ಸಂಗ್ರಹ ಮಾಡಿದ್ದೂ, ಅಲ್ಲದೆ ದಾಳಿಗೆ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು.