ನವದೆಹಲಿ: ದೇಶದಲ್ಲೇ ಅತಿ ಎತ್ತರದ ಕಸದ ರಾಶಿ ಎಂಬ ಕುಖ್ಯಾತಿ ಹೊಂದಿರುವ ದೆಹಲಿ ಪೂರ್ವದ ಘಾಜಿಪುರದಲ್ಲಿರುವ ಕಸದ ರಾಶಿ 2020 ರ ಹೊತ್ತಿಗೆ ತಾಜ್‌ ಮಹಲ್‌ಗಿಂತ ಎತ್ತರಕ್ಕೆ ಏರಲಿದೆ. ಈ ಮೂಲಕ ವಿಶ್ವದ ಅತ್ಯಂತ ಮಾಲಿನ್ಯಕಾರಕ ರಾಜಧಾನಿ ಎಂಬ ಕುಖ್ಯಾತಿ ಹೊಂದಿರುವ ದೆಹಲಿಯ ಕುಖ್ಯಾತಿ ಇನ್ನಷ್ಟುಎತ್ತರಕ್ಕೆ ಏರುವ ಭೀತಿ ಎದುರಾಗಿದೆ.

ಘಾಜೀಪುರದಲ್ಲಿ 1984ರಲ್ಲಿ ಕಸ ಸಂಗ್ರಹಿಸುವುದಕ್ಕೆ ಆರಂಭಿಸಲಾಗಿತ್ತು. 2002ರಲ್ಲೇ ಅದು ತನ್ನ ಸಾಮರ್ಥ್ಯವನ್ನು ಮುಟ್ಟಿದೆ. ಆದರೆ ಈಗಲೂ ನಿತ್ಯ 2000 ಟನ್‌ಗಳಷ್ಟುಕಸ ತಂದು ಅದೇ ಜಾಗದಲ್ಲಿ ಸುರಿಯಾಗುತ್ತಿದೆ. 

ಹೀಗಾಗಿ ಈಗಾಗಲೇ ಕಸದ ರಾಶಿ 65 ಮೀಟರ್‌ ಅಂದರೆ 213 ಅಡಿ ಎತ್ತರಕ್ಕೆ ತಲುಪಿದೆ. ಪ್ರತಿ ವರ್ಷ 10 ಮೀಟರ್‌ನಷ್ಟುಕಸದ ರಾಶಿ ಏರುತ್ತಲೇ ಇದೆ. ಇದೇ ಗತಿಯಲ್ಲಿ ಸಾಗಿದರೆ 2020ರಲ್ಲಿ ಕಸದ ರಾಶಿ ತಾಜ್‌ಮಹಲ್‌ಗಿಂತ (239 ಅಡಿ) ಎತ್ತರವಾಗಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

2008ರಲ್ಲಿ ಈ ಕಸದ ರಾಶಿ ಕುಸಿದು ಬಿದ್ದು ಇಬ್ಬರು ಸಾವನ್ನಪ್ಪಿದ್ದರು. ಈ ಕಸದ ರಾಶಿಯ ಸುತ್ತಮುತ್ತಲೂ ವಾಸಿಸುವ ಮಕ್ಕಳು, ವೃದ್ಧರು ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗಿದ್ದರೂ, ಕಸ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗುತ್ತಲೇ ಬಂದಿವೆ.