ಮೂಲತಃ ಕಾಶ್ಮೀರದ ಬುಡಗಾಮ್ ಜಿಲ್ಲೆಯವರಾದ ಸಯದ್ ಸಲಾಹುದ್ದೀನ್ 1989ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿ ಅಲ್ಲಿ ಭಾರತ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲಾ ಉಗ್ರರಂತೆ ತನ್ನನ್ನು ತಾನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆದುಕೊಳ್ಳುವ ಸಲಾಹುದ್ದೀನ್ ಕಳೆದ 27 ವರ್ಷಗಳಿಂದ ಕಾಶ್ಮೀರೀ ಯುವಕರಿಗೆ ಭಾರತ ವಿರೋಧಿ ಹೋರಾಟಗಳಲ್ಲಿ ತೊಡಗಲು ತರಬೇತಿ ಮತ್ತು ಪ್ರಚೋದನೆ ಕೊಡುತ್ತಾ ಬಂದಿದ್ದಾರೆ.
ನವದೆಹಲಿ(ಜುಲೈ 03): ಕಳೆದ ವಾರವಷ್ಟೇ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಸಯೆದ್ ಸಲಾಹುದ್ದೀನ್'ನನ್ನು ಅಮೆರಿಕ ಅಧ್ಯಕ್ಷರು ಜಾಗತಿಕ ಭಯೋತ್ಪಾದಕನೆಂದು ಘೋಷಣೆ ಮಾಡಿದರು. ಆದರೆ, ಪಾಕಿಸ್ತಾನ ಮಾತ್ರ ಆತನನ್ನು ಉಗ್ರನೆಂದು ಒಪ್ಪಲು ಸಿದ್ಧವೇ ಇಲ್ಲ. ಭಾರತದಲ್ಲಿ ದಾಳಿ ಮಾಡುವ ಉಗ್ರರಿಗೆ ತಾನು ಆಶ್ರಯ ನೀಡುವುದೇ ಇಲ್ಲ ಎಂಬ ತನ್ನ ಮೊಂಡು ವಾದವನ್ನು ಮುಂದುವರಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ನಿನ್ನೆ ಪಾಕಿಸ್ತಾನದ ಟಿವಿ ಚಾನೆಲ್'ನಲ್ಲಿ ಸಯದ್ ಸಲಾಹುದ್ದೀನ್'ರೇ ಸ್ವತಃ ಒಂದಷ್ಟು ಸ್ಫೋಟಕ ಹೇಳಿಕೆ ನೀಡಿ ಸತ್ಯಾಂಶವನ್ನು ಹೊರಗೆಡವಿದ್ದಾರೆ. ಭಾರತದಲ್ಲಿ ತಾನು ಸಾಕಷ್ಟು ಬಾರಿ ದಾಳಿ ಮಾಡಿದ್ದೇನೆ. ಅಲ್ಲಿ ಎಲ್ಲಿ ಬೇಕಾದರೂ ದಾಳಿ ನಡೆಸಿಸಬಲ್ಲೆ ಎಂದು ಜಿಯೋ ಟಿವಿ ಸಂದರ್ಶನದಲ್ಲಿ ಸಲಾಹುದ್ದೀನ್ ಹೇಳಿದ್ದಾರೆ.
ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಹೇಳಿದ ಮಾತುಗಳು ಆತನ ಭಯೋತ್ಪಾದಕ ಕೃತ್ಯಗಳಿಗೆ ಕನ್ನಡಿ ಹಿಡಿದಂತಿವೆ. ಉಗ್ರರಿಗೆ ಪಾಕಿಸ್ತಾನ ಆಶ್ರಯ ಕೊಡುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕೆ ಎಂದು ಭಾರತ ಹೇಳಿದೆ.
ಸಲಾಹುದ್ದೀನ್ ಹೇಳಿದ್ದೇನು?
"ಭಾರತದಲ್ಲಿ ತಾನು ಹಲವು ಕಾರ್ಯಾಚರಣೆಗಳನ್ನು ನಡೆಸಿದ್ದೇನೆ. ಭಾರತದಲ್ಲಿ ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ದಾಳಿ ನಡೆಸಬಲ್ಲೆ.... ಈ ಕಾರ್ಯಾಚರಣೆಗಳಿಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಿಂದ ತಾನು ಸುಲಭವಾಗಿ ಪಡೆಯಬಲ್ಲೆ" ಎಂದು ಸಲಾಹುದ್ದೀನ್ ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮೂಲತಃ ಕಾಶ್ಮೀರದ ಬುಡಗಾಮ್ ಜಿಲ್ಲೆಯವರಾದ ಸಯದ್ ಸಲಾಹುದ್ದೀನ್ 1989ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿ ಅಲ್ಲಿ ಭಾರತ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲಾ ಉಗ್ರರಂತೆ ತನ್ನನ್ನು ತಾನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆದುಕೊಳ್ಳುವ ಸಲಾಹುದ್ದೀನ್ ಕಳೆದ 27 ವರ್ಷಗಳಿಂದ ಕಾಶ್ಮೀರೀ ಯುವಕರಿಗೆ ಭಾರತ ವಿರೋಧಿ ಹೋರಾಟಗಳಲ್ಲಿ ತೊಡಗಲು ತರಬೇತಿ ಮತ್ತು ಪ್ರಚೋದನೆ ಕೊಡುತ್ತಾ ಬಂದಿದ್ದಾರೆ. ಕಾಶ್ಮೀರದಲ್ಲಿ ಭಾರತ ಸರಕಾರ ಮತ್ತು ಸೇನೆಯ ವಿರುದ್ಧ ಜನರನ್ನು ಎತ್ತಿಕಟ್ಟಿ ಆಗಾಗ ದಂಗೆಗಳಾಗುವಂತೆ ಇವರು ನೋಡಿಕೊಳ್ಳುತ್ತಾರೆ.
ಪಾಕ್ ಬೆಂಬಲ:
ಸಯೆದ್ ಸಲಾಹುದ್ದೀನ್'ರನ್ನು ಭಯೋತ್ಪಾದಕರೆಂದು ಕರೆಯುವುದು ಕಾಶ್ಮೀರಿಗಳ ಆತ್ಮಾಭಿಮಾನದ ಹೋರಾಟಕ್ಕೆ ಮಾಡಿದ ಅವಮಾನ ಎಂದು ಪಾಕಿಸ್ತಾನ ಬಣ್ಣಿಸುತ್ತದೆ. ಕಾಶ್ಮೀರಿ ಜನರ ಹೋರಾಟಕ್ಕೆ ಪಾಕಿಸ್ತಾನವು ರಾಜಕೀಯ, ರಾಜತಾಂತ್ರಿಕ ಮತ್ತು ನೈತಿಕ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ ಎಂದು ಪಾಕ್ ಘಂಟಾಘೋಷವಾಗೇ ಹೇಳುತ್ತಿದೆ.
ಅಮೆರಿಕ ಹೇಳುವುದೇನು?
ಸಯೆದ್ ಸಲಾಹುದ್ದೀನ್ ಒಬ್ಬ ಅಪಾಯಕಾರಿ ಉಗ್ರಗಾಮಿ ಎಂಬುದನ್ನು ತಿಳಿಸಲು ಅಮೆರಿಕ ಈ ಒಂದು ಹೇಳಿಕೆ ನೀಡಿತು. "2016, ಸೆಪ್ಟಂಬರ್'ನಲ್ಲಿ ಕಾಶ್ಮೀರಿ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ದೊರಕಿಸಲು ನಡೆಯುವ ಯಾವುದೇ ಪ್ರಯತ್ನಕ್ಕೆ ತಡೆಯೊಡ್ಡುತ್ತೇನೆಂದು ಸಲಾಹುದ್ದೀನ್ ಹೇಳುತ್ತಾನೆ. ಹೆಚ್ಚೆಚ್ಚು ಕಾಶ್ಮೀರೀ ಆತ್ಮಾಹುತಿ ಬಾಂಬರ್'ಗಳ ತರಬೇತಿ ನೀಡುತ್ತೇವೆ ಎಂದು ಬೆದರಿಕೆ ಹಾಕುತ್ತಾನೆ. ಕಾಶ್ಮೀರ ಕಣಿವೆಯನ್ನು ಭಾರತೀಯ ಸೈನಿಕರ ಸ್ಮಶಾನವನ್ನಾಗಿ ಮಾಡಲು ಪಣ ತೊಡುತ್ತಾನೆ," ಎಂದು ಅಮೆರಿಕ ಸರಕಾರವು ಕಳೆದ ವಾರದ ಮೋದಿ ಭೇಟಿ ವೇಳೆ ಹೇಳಿಕೆ ಬಿಡುಗಡೆ ಮಾಡುತ್ತದೆ. ಸಲಾಹುದ್ದೀನ್'ರನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಅಧಿಕೃತವಾಗಿ ಸೇರಿಸಲಾಗುತ್ತದೆ.
