ಬೆಂಗಳೂರು :  ರಾಜ್ಯಾದ್ಯಂತ ಹಂದಿಜ್ವರ (ಎಚ್‌1ಎನ್‌1) ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ತೀವ್ರಗೊಂಡಿದ್ದು, ಶುಕ್ರವಾರ ಒಂದೇ ದಿನ ಮಾರಣಾಂತಿಕ ಜ್ವರಕ್ಕೆ ಬರೋಬ್ಬರಿ ಐದು ಮಂದಿ ಬಲಿಯಾಗಿದ್ದಾರೆ.

ಇದರಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಹಂದಿಜ್ವರಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ದಿನೇ ದಿನೇ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ ಹನ್ನೆರಡು ದಿನಗಳಲ್ಲಿ ಎಚ್‌1ಎನ್‌1 ಪ್ರಕರಣಗಳು ಬರೋಬ್ಬರಿ ಶೇ.35ರಷ್ಟುಹೆಚ್ಚಳ ಕಂಡಿವೆ. ಅಲ್ಲದೆ, ಅ.20ಕ್ಕೆ 10ರಷ್ಟಿದ್ದ ಹಂದಿಜ್ವರಕ್ಕೆ ಬಲಿಯಾದವರ ಸಂಖ್ಯೆ ನ.2ಕ್ಕೆ 17ಕ್ಕೆ ಮುಟ್ಟಿದೆ. ಕಳೆದ ಹನ್ನೆರಡು ದಿನಗಳಲ್ಲಿ 347 ಪ್ರಕರಣ ದೃಢಪಟ್ಟಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಶುಕ್ರವಾರ 5 ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಮಂದಿ ಹಾಗೂ ಹಾಸನ, ಹಾವೇರಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಎಚ್‌1ಎನ್‌1ಗೆ ಬಲಿಯಾಗಿದ್ದಾರೆ.

ಒಟ್ಟಾರೆ, ಬೆಂಗಳೂರು ನಗರದಲ್ಲಿ 4, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3, ಹಾಸನ 3, ಬಳ್ಳಾರಿ 1, ಹಾವೇರಿ 1, ಬೆಂಗಳೂರು ಗ್ರಾಮೀಣ 1, ತುಮಕೂರು 3 ಹಾಗೂ ರಾಮನಗರದಲ್ಲಿ 1 ಸೇರಿ 17 ಮಂದಿ ಪ್ರಸಕ್ತ ಸಾಲಿನಲ್ಲಿ ಮೃತಪಟ್ಟಿದ್ದಾರೆ. ಈ ಎಲ್ಲಾ ಸಾವು ಕಳೆದ ಅಕ್ಟೋಬರ್‌ ಮೊದಲ ವಾರದಿಂದಲೇ ವರದಿಯಾಗಿರುವುದು ಮತ್ತಷ್ಟುಆತಂಕ ಸೃಷ್ಟಿಸಿದೆ.

ತೀವ್ರಗೊಳ್ಳುತ್ತಿದೆ ಸೋಂಕು:

ಎಚ್‌1ಎನ್‌1 ಜ್ವರ ಸಾಂಕ್ರಾಮಿಕ ಕಾಯಿಲೆಯಾಗಿರುವುದರಿಂದ ರಾಜ್ಯದಲ್ಲಿ ವೇಗವಾಗಿ ಹರಡುತ್ತಿದೆ. ಜನವರಿಯಿಂದ ಈವರೆಗೆ ರಾಜ್ಯದಲ್ಲಿ 999 ಎಚ್‌1ಎನ್‌1 ಪ್ರಕರಣ ದೃಢಪಟ್ಟಿವೆ. ಕಳೆದ ಹನ್ನೆರಡು ದಿನದಲ್ಲೇ 347 ಪ್ರಕರಣ ದೃಢಪಟ್ಟಿವೆ. ಹೀಗಾಗಿ ಕಾಯಿಲೆ ತೀವ್ರವಾಗಿ ಹರಡುತ್ತಿರುವುದು ಖಚಿತಪಟ್ಟಿದೆ.

ಜನವರಿಯಿಂದ ಈವರೆಗೆ 7004 ಮಾದರಿ ಪರೀಕ್ಷೆ ನಡೆಸಿದ್ದು, 999 ಪ್ರಕರಣ ಖಚಿತಪಟ್ಟಿವೆ. ಇವುಗಳಲ್ಲಿ ಬೆಂಗಳೂರು ನಗರದಲ್ಲಿ 275 ಪ್ರಕರಣ ದೃಢಪಟ್ಟಿದ್ದು 4 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಉಡುಪಿಯಲ್ಲಿ 2ನೇ ಅತಿ ಹೆಚ್ಚು 78 ಪ್ರಕರಣ ದೃಢಪಟ್ಟರೂ ಯಾವುದೇ ಸಾವು ವರದಿಯಾಗಿಲ್ಲ. ಹೀಗಾಗಿ ಕಾಯಿಲೆಗಳು ತೀವ್ರವಾಗಿ ಹರಡುತ್ತಿರುವ ಪ್ರದೇಶದಲ್ಲಿ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ರೋಗದ ಬಗ್ಗೆ ಅರಿವು ಮೂಡಿಸುವ ಶಿಬಿರಗಳನ್ನು ಏರ್ಪಡಿಸಬೇಕು. ರೋಗ ಲಕ್ಷಣಗಳು ಕಂಡುಬಂದವರನ್ನು ಕೂಡಲೇ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ಕೊಡಿಸಬೇಕು. ಈ ಬಗ್ಗೆ ಕಾಲ ಕಾಲಕ್ಕೆ ವರದಿ ನೀಡಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ.

ಆತಂಕ ಬೇಡ, ಎಚ್ಚರವಿರಲಿ:

ಎಚ್‌1ಎನ್‌1 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳು, ಮೆಟ್ರೋ ನಿಲ್ದಾಣಗಳು, ಪ್ರಾಥಮಿಕ, ತಾಲೂಕು, ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಎಚ್‌1ಎನ್‌1 ಬಗ್ಗೆ ಜಾಗೃತಿ ಮೂಡಿಸುವ ಸಂದೇಶ ನೀಡಲಾಗುತ್ತಿದೆ.

ಎಚ್‌1ಎನ್‌1 ಬಗ್ಗೆ ಆತಂಕಪಡುವ ಬದಲು ಎಚ್ಚರಿಕೆಯಿಂದ ಇರಬೇಕು. ಪ್ರತಿಯೊಬ್ಬ ಶಂಕಿತ ಎಚ್‌1ಎನ್‌1 ರೋಗಿಯನ್ನೂ ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ. ತೀವ್ರ ಜ್ವರ, ಉಸಿರಾಟ ಸಮಸ್ಯೆ, ರಕ್ತದೊತ್ತಡ ಸಮಸ್ಯೆ, ಆಮ್ಲಜನಕ ಪ್ರಮಾಣದಲ್ಲಿ ವ್ಯತ್ಯಯ ಉಂಟಾದರೆ ಅಂತಹವರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕು. ಪ್ರತಿಯೊಬ್ಬ ಶಂಕಿತರಿಗೂ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮದ ನಿರ್ದೇಶಕ ಡಾ.ಸಜ್ಜನ್‌ ಶೆಟ್ಟಿಹೇಳಿದ್ದಾರೆ.

ರೋಗ ಲಕ್ಷಣ ಏನು?

ಎಚ್‌1ಎನ್‌1 (ಹಂದಿಜ್ವರ) ಮೂರು ಹಂತದಲ್ಲಿ ಕಾಣಿಸಿಕೊಳ್ಳಲಿದ್ದು, ಆರಂಭದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಪ್ರಾಣ ಹಾನಿ ಸಂಭವಿಸುತ್ತದೆ. ಮೊದಲ ಹಂತದಲ್ಲಿ ಸಾಮಾನ್ಯ ಜ್ವರ, ಕೆಮ್ಮು, ನೆಗಡಿ, ವಾಕರಿಕೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಚಿಕಿತ್ಸೆಯೊಂದಿಗೆ 1-2 ದಿನಗಳ ನಿಗಾ ವಹಿಸಬೇಕಾಗುತ್ತದೆ. ಎರಡನೇ ಹಂತದಲ್ಲಿ ಜ್ವರ, ಕೆಮ್ಮು ಹೆಚ್ಚಾಗಿ ಹಳದಿ ಕಫ, ಅತಿ ಭೇದಿ ಅಥವಾ ವಾಂತಿ, ನೆಗಡಿ, ಗಂಟಲು ಕೆರೆತ ಉಂಟಾಗುತ್ತದೆ.

3ನೇ ಹಂತದಲ್ಲಿ ತೀವ್ರ ಸ್ವರೂಪದ ಜ್ವರ, ಕಫದಲ್ಲಿ ರಕ್ತ, ಉಬ್ಬಸ, ನ್ಯುಮೋನಿಯಾದೊಂದಿಗೆ ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಹಂತದಲ್ಲಿ ರೋಗಿ ಗಂಭೀರ ಹಂತಕ್ಕೆ ತಲುಪುತ್ತಾನೆ. ಈ ಹಂತದಲ್ಲಿ ಚಿಕಿತ್ಸೆ ಫಲಕಾರಿಯಾಗುವುದು ಕಷ್ಟ. ಹೀಗಾಗಿ ಮೊದಲ ಹಾಗೂ ಎರಡನೇ ಹಂತದ ಲಕ್ಷಣ ಕಾಣಿಸಿಕೊಂಡ ತಕ್ಷಣ ಸೂಕ್ತ ಚಿಕಿತ್ಸೆ ಪಡೆಯಬೇಕು.