ಶಾಸಕರಿಗೆ ಈಜುಕೊಳ ನಿರ್ಮಾಣಕ್ಕೆ ಆದೇಶ | ಮಹಿಳೆ, ಪುರುಷ ಶಾಸಕರಿಗೆ ಪ್ರತ್ಯೇಕ ಪೂಲ್‌ | ತಲಾ 2 ಕೋಟಿ ರೂ. ಅಂದಾಜು ವೆಚ್ಚ

ವರದಿ: ಜಿ.ಮಹಾಂತೇಶ್‌, ಬೆಂಗಳೂರು

ಶಾಸಕರಿಗೆ ವೇತನ ಭತ್ಯೆ ಸೇರಿ ಇನ್ನಿತರ ಸೌಕರ್ಯಗಳನ್ನು ಒದಗಿಸಿರುವ ವಿಧಾನಸಭೆ ಸಚಿವಾಲಯ ಈಗ ಶಾಸಕರ ಭವನದ ಹಿಂಭಾಗದ ಉದ್ಯಾನದಲ್ಲಿ ಪುರುಷ ಹಾಗೂ ಮಹಿಳಾ ಎಂಎಲ್‌ಎಗಳಿಗೆ ಎರಡು ಪ್ರತ್ಯೇಕ ಈಜುಕೊಳ ನಿರ್ಮಿಸಲು ಹಾಗೂ ಕಟ್ಟಡಗಳ ಸುತ್ತ ವಾಕಿಂಗ್‌ ಪಾಥ್‌ ನಿರ್ಮಿಸಲು ಮುಂದಾಗಿದೆ.

ಈ ಸಂಬಂಧ ಸಭಾಧ್ಯಕ್ಷ ಕೋಳಿವಾಡ ಅವರು ಆದೇಶ ಹೊರಡಿಸಿದ್ದು, ಈಜುಕೊಳ ನಿರ್ಮಾಣಕ್ಕೆ ಸಂಬಂಧಿಸಿ ಅಂದಾಜು ವೆಚ್ಚ ಮತ್ತು ನೀಲಿ ನಕ್ಷೆ ಒದಗಿಸಬೇಕು ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಒಂದೊಂದು ಈಜುಕೊಳ ನಿರ್ಮಾಣಕ್ಕೆ ಅಂದಾಜು .2 ಕೋಟಿ ಖರ್ಚಾಗಲಿದೆ. ಈಜುಕೊಳ ನಿರ್ವಹಣೆ ಮಾಡುವ ನುರಿತ ಸಿಬ್ಬಂದಿ ಸಚಿವಾಲಯದಲ್ಲಿಲ್ಲ. ಅಲ್ಲದೆ, ಮಹಿಳಾ ಶಾಸಕರಾರ‍ಯರೂ ಈಜುಕೊಳ ಬಳಸುವುದು ಅನುಮಾನ. ಶಾಸಕರ ಭವನದಲ್ಲಿರುವ ಉದ್ಯಾನವನ್ನು ನಾಶ ಮಾಡಿ ಈಜುಕೊಳ ನಿರ್ಮಿಸಲು ಹೊರಟಿರುವ ಸಚಿವಾಲಯದ ನಿರ್ಧಾರಕ್ಕೆ ಹಲವು ಆಕ್ಷೇಪಗಳು ಕೇಳಿ ಬಂದಿವೆ.

ಉದ್ದೇಶಿತ ಈಜುಕೊಳ ನಿರ್ಮಾಣಕ್ಕೆ ಶಾಸಕರ ವಲಯದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ವೋದಯ ಪಕ್ಷದ ಕೆ.ಎಸ್‌.ಪುಟ್ಟಣ್ಣಯ್ಯ ಮತ್ತು ಶಾಸಕಿ ಶಕುಂತಲಾ ಶೆಟ್ಟಿಅವರು ಸಚಿವಾಲಯದ ಉದ್ದೇಶಿತ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಕೆಲ ತಿಂಗಳಿಂದ ವಿಧಾನಸಭೆ ಸಚಿವಾಲಯ ಕೋಟ್ಯಂತರ ರುಪಾಯಿ ವೆಚ್ಚದ ಹಲವು ಕಾಮಗಾರಿಗಳನ್ನು ಕೈಗೆತ್ತಿ​ಕೊಂಡಿದೆ. ಇದರಲ್ಲಿ ಶಾಸಕರಿಗಾಗಿ ಪ್ರತ್ಯೇಕ ಕ್ಲಬ್‌ ನಿರ್ಮಾಣವೂ ಸೇರಿದೆ. ಶಾಸಕರ ಕ್ಲಬ್‌ನಲ್ಲಿ ಮನರಂಜನೆ, ಕ್ರೀಡೆ, ಅಧ್ಯಯನ ಸೇರಿ ಈಜುಕೊಳವೂ ಇರಲಿದೆ ಎಂದು ತಿಳಿದು ಬಂದಿದೆ. ಕ್ಲಬ್‌ನಲ್ಲಿ ಈಜುಕೊಳ ಇರುವು​ದರಿಂದ ಶಾಸಕರ ಭವನದಲ್ಲಿ ಪ್ರತ್ಯೇಕವಾಗಿ ಈಜುಕೊಳ ನಿರ್ಮಾಣ ಎಷ್ಟರ ಮಟ್ಟಿಗೆ ಸರಿ? ಇದೊಂದು ದುಂದುವೆಚ್ಚಕ್ಕೆ ದಾರಿ ಮಾಡಿಕೊಡುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ ವಿಧಾನಸಭೆ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು.

ಶಾಸಕರ ಭವನದಲ್ಲಿ ತಂಗುವ ಶಾಸಕರ ಸಂಖ್ಯೆ ಕಡಿಮೆ ಇದೆ. ಮೇಲಾಗಿ ಶಾಸಕರಿಗಿಂತ ಅವರ ಬೆಂಬಲಿಗರು, ಅವರ ಹೆಸರಿನಲ್ಲಿ ಬರುವ ಅತಿಥಿಗಳ ಸಂಖ್ಯೆಯೇ ಹೆಚ್ಚಾಗಿದೆ. ಅತಿಥಿ ಕೊಠಡಿಗಳಿಗೆ ಅತ್ಯಂತ ಕಡಿಮೆ ಬಾಡಿಗೆ ನಿಗದಿಯಾಗಿರುವುದರಿಂದ ಅತಿಥಿಗಳು ಕೊಠಡಿಗಳನ್ನು ನಿಗದಿತ ಅವಧಿಯೊಳಗೆ ಖಾಲಿ ಮಾಡದೆ ಉಳಿದುಕೊಳ್ಳುತ್ತಿದ್ದಾರೆ ಎಂಬ ದೂರುಗಳು ಸಚಿವಾಲಯಕ್ಕೆ ಸಲ್ಲಿಕೆಯಾಗಿವೆ. 

ಹೀಗಿರುವಾಗ ಶಾಸಕರ ಭವನದಲ್ಲಿ ಈಜುಕೊಳ ನಿರ್ಮಿಸಿದರೆ ಶಾಸಕರಿಗಿಂತ ಅವರ ಹೆಸರಿನಲ್ಲಿ ಬರುವ ಅತಿಥಿಗಳು ಮತ್ತು ಬೆಂಬಲಿಗರ ಆಟಾಟೋಪ ಇನ್ನಷ್ಟುಹೆಚ್ಚಲಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಶಾಸಕರ ಭವನದ ಅಧಿಕಾರಿಯೊಬ್ಬರು.