ಕಂಬಳ ಒಂದು ಹಿಂಸಾತ್ಮಕ ಕ್ರೀಡೆ ಅಲ್ಲ. ಹೀಗಾಗಿ ಸದನದಲ್ಲಿ ಮಸೂದೆ ಮಂಡಿಸಿ ಕಾನೂನು ತರಲು ಸರ್ಕಾರ ಚಿಂತಿಸಿದೆ.ಈ ಬಗ್ಗೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಚಿವ ಸಂಪುಟಸಭೆಯಲ್ಲಿ ಚರ್ಚೆ ಮಾಡುತ್ತೇವೆ.

ಬೆಂಗಳೂರು(ಜ.25): ಕಂಬಳಕ್ಕಾಗಿ ಕಾನೂನು ರೂಪಿಸಲು ಸುವರ್ಣ ನ್ಯೂಸ್ ಕೈಗೊಂಡ ಅಭಿಯಾನಕ್ಕೆ ಮೊದಲ ಜಯ ದೊರಕಿದ್ದು, ಕಂಬಳಕ್ಕೆ ಕಾನೂನು ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ವಿಧಾನಸೌಧದಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದ ಕರಾವಳಿ ಕ್ರೀಡೆ ಕಂಬಳಕ್ಕಾಗಿ ಸದನದಲ್ಲಿ ಮಸೂದೆ ಮಂಡಿಸಿ ಕಾನೂನು ತರಲು ಸರ್ಕಾರ ಚಿಂತಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಕಂಬಳಕ್ಕೆ ಕಾನೂನು ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕಂಬಳಕ್ಕೆ 700- 800 ವರ್ಷಗಳ ಇತಿಹಾಸವಿದೆ. ಜಲ್ಲಿಕಟ್ಟುಗೆ ಕಂಬಳಕ್ಕೆ ಹೋಲಿಕೆ ಬೇಡ. ಕಂಬಳ ನಡೆಸಬೇಕು ಎಂದು ನಾವು ಈ ಮೊದಲು ಹೇಳಿದ್ದೇವೆ. 07-05-2014 ರಂದು ಸುಪ್ರೀಂ ತೀರ್ಪು ಪ್ರಕಾರ ಜಲ್ಲಿಕಟ್ಟು ಹಾಗೂ ಇತರೆ ಪ್ರಾಣಿ ಕುರಿತ ಕ್ರೀಡೆಗಳು ಸಾಧುವಲ್ಲ. ಅವು ಹಿಂಸಾತ್ಮಕ ಎಂದು ಸುಪ್ರೀಂ ಹೇಳಿತ್ತು. ಆದರೆ 17-12-2015 ರಂದು ಕಂಬಳಕ್ಕೆ ಅನುಮತಿ ನೀಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು ಎಂದು ಹೇಳಿದರು.

ಕಂಬಳ ಒಂದು ಹಿಂಸಾತ್ಮಕ ಕ್ರೀಡೆ ಅಲ್ಲ. ಹೀಗಾಗಿ ಸದನದಲ್ಲಿ ಮಸೂದೆ ಮಂಡಿಸಿ ಕಾನೂನು ತರಲು ಸರ್ಕಾರ ಚಿಂತಿಸಿದೆ.ಈ ಬಗ್ಗೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಚಿವ ಸಂಪುಟಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಕಂಬಳ ನಡೆಸಲು ಬೇಕಾದ ಕಾನೂನು ರೂಪಿಸಲು ರಾಜ್ಯ ಸರ್ಕಾರ ತಿರ್ಮಾನಿಸಿದೆ. ಈಗಲೂ ಕಂಬಳ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಸಚಿವರು ಕಂಬಳ ವಿವಾದಕ್ಕೆ ತೆರೆ ಎಳೆದರು.

ಪಶುಸಂಗೋಪನೆ ಇಲಾಖೆ ಆಯುಕ್ತ ಶೇಖರ್, ಕಾನೂನು ಇಲಾಖೆ ಕಾರ್ಯದರ್ಶಿ ಶ್ರೀನಿವಾಸ್ ಸಭೆಯಲ್ಲಿ ಭಾಗಿಯಾಗಿದ್ದರು.