. ಅಲ್ಲದೇ, ಆಸ್ಪತ್ರೆ ನಿರ್ವಹಣೆ ಮಾಡಿದ ದಾಖಲೆಗಳಲ್ಲಿ ವಿಪರೀತ ಲೋಪದೋಷಗಳು ಕಂಡು ಬಂದಿವೆ. ರೋಗಿಗಳ ಅಂಗಾಂಶ ಪರೀಕ್ಷೆ ನಡೆಸದೆಯೇ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ವಿಚಾರಣೆ ವರದಿಯಿಂದ ಗೊತ್ತಾಗಿದೆ.
ಬೆಂಗಳೂರು(ಡಿ.26): ನಗರದ ಕ್ಯಾನ್ಸರ್ ಆಸ್ಪತ್ರೆಯೊಂದು ಕ್ಯಾನ್ಸರ್ ಚಿಕಿತ್ಸೆ ನೀಡುವುದಾಗಿ ಹೇಳಿ ಸಾರ್ವಜನಿಕರಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಸರ್ಕಾರಕ್ಕೆ ಲಕ್ಷಾಂತರ ವಂಚಿಸಿರುವ ಹಗರಣವನ್ನು ಸುವರ್ಣನ್ಯೂಸ್-ಕನ್ನಡಪ್ರಭ ಹೊರ ಹಾಕಿದೆ. ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಕ್ಯಾನ್ಸರ್ ಚಿಕಿತ್ಸೆಗೆಂದು ರಾಜ್ಯ ಸರ್ಕಾರ ವಾಜಪೇಯಿ ಆರೋಗ್ಯ ಯೋಜನೆಯನ್ನು ಕಳೆದ ಕೆಲವು ವರ್ಷಗಳ ಹಿಂದೆ ಜಾರಿಗೊಳಿಸಿತ್ತು. ಆದರೆ ಸರ್ಕಾರ ಮಾಡಿರೋ ಈ ಪುಣ್ಯದ ಕೆಲಸವನ್ನು ಖಾಸಗಿ ಆಸ್ಪತ್ರೆಗಳು ತಮ್ಮ ಧನದಾಹಕ್ಕೆ ಬಳಸಿಕೊಳ್ಳುತ್ತಿವೆ.
ಬೆಂಗಳೂರಿನ ನಂದಿನಿ ಲೇಔಟ್ನ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಗೋಲ್ಮಾಲ್ ಮಾಡಿರುವ ಆಸ್ಪತ್ರೆ. ಈ ಅಸ್ಪತ್ರೆ ಕ್ಯಾನ್ಸರ್ ಇಲ್ಲದವರಿಗೂ ಕಿಮೋ-ರೇಡಿಯೋ ಚಿಕಿತ್ಸೆ ಕೊಟ್ಟಿದೆ. ಆದರೆ ಕ್ಯಾನ್ಸರ್ ಇದ್ದವರಿಗೆ ಅಪೂರ್ಣ ಚಿಕಿತ್ಸೆ ನೀಡಿ ಜನರ ಜತೆ ಚೆಲ್ಲಾಟ ಆಡಿದೆ. ಈ ಆಘಾತಕಾರಿ ಪ್ರಕರಣವನ್ನು ಕಿದ್ವಾಯಿ ಆಸ್ಪತ್ರೆ ವೈದ್ಯ ಡಾ.ಅಶೋಕ್ ಶೆಣೈ ಮತ್ತು ಡಾ.ಪಿಎಸ್.ರೇವಡಿ ಅವರ ನೇತೃತ್ವದ ತಂಡ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಕೊಟ್ಟಿದೆ. ಆದರೆ ಇಷ್ಟೆಲ್ಲಾ ಮೋಸ ಮಾಡಿದ್ರೂ, ಆಸ್ಪತ್ರೆಯೊಂದಿಗಿನ ಒಪ್ಪಂದವನ್ನ ಅಮಾನತಿನಲ್ಲಿಟ್ಟಿರುವುದನ್ನ ಹೊರತುಪಡಿಸಿ, ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ವರದಿಯಲ್ಲಿ ಕ್ಯಾನ್ಸರ್ ಇಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡಿರುವ ಆರೋಪ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕೇಳಿಬಂದಿದೆ. ಅಲ್ಲದೇ, ಆಸ್ಪತ್ರೆ ನಿರ್ವಹಣೆ ಮಾಡಿದ ದಾಖಲೆಗಳಲ್ಲಿ ವಿಪರೀತ ಲೋಪದೋಷಗಳು ಕಂಡು ಬಂದಿವೆ. ರೋಗಿಗಳ ಅಂಗಾಂಶ ಪರೀಕ್ಷೆ ನಡೆಸದೆಯೇ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ವಿಚಾರಣೆ ವರದಿಯಿಂದ ಗೊತ್ತಾಗಿದೆ. ಮೂರು ತಿಂಗಳಲ್ಲಿ ಕೇವಲ 2 ಸಿ.ಟಿ.ಸ್ಕ್ಯಾನ್ ಮಾಡಿಸಿದ್ದರೂ, 38 ಸಿ.ಟಿ.ಸ್ಕ್ಯಾನ್ ಮಾಡಿಸಲಾಗಿದೆ ಎಂದು ತೋರಿಸಿ ನಕಲಿ ದಾಖಲೆ ಸೃಷ್ಟಿಸಲಾಗಿದೆ. ವಾಜಪೇಯಿ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಕೊಡುವ ಔಷಧಗಳಿಗೆ ಸಂಬಂಧಿಸಿದಂತೆ ದಾಖಲೆ ಇಟ್ಟಿಲ್ಲ. ಫಲಾನುಭವಿಗಳಿಗೆ ಕ್ಯಾನ್ಸರ್‌ಗೆ ಸಂಬಂಧಪಡದ ಇಂಜಕ್ಷನ್‌ಗಳನ್ನು ನೀಡಿರೋದನ್ನು ವಿಚಾರಣೆ ತಂಡ ಪತ್ತೆ ಹಚ್ಚಿದೆ. ರೋಗಿಗಳು ಸತ್ತ ಬಳಿಕವೂ 5 ಬಾರಿ ಕಿಮೋ ಹಾಗೂ 28 ಬಾರಿ ರೇಡಿಯೋ ಥೆರಪಿ ನೀಡಲಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ.
ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಪ್ರಕರಣವನ್ನೇ ಮಾದರಿಯಾಗಿಟ್ಟುಕೊಂಡು ರಾಜ್ಯ ಸರ್ಕಾರ ಉಳಿದ ಎಲ್ಲಾ ಖಾಸಗಿ ಆಸ್ಪತ್ರೆಗಳು ಸಲ್ಲಿಸಿರೋ ಬಿಲ್ಗಳನ್ನು ಪರಿಶೀಲನೆ ಮಾಡ್ಬೇಕು. ಆಗ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರೋದ್ರಲ್ಲಿ ಯಾವುದೇ ಅನುಮಾನಗಳಿಲ್ಲ.
ತನಿಖಾ ತಂಡ ಹೊರಹಾಕಿದ ಸ್ಫೋಟಕ ಮಾಹಿತಿ
ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಗಳ ವಿರುದ್ಧ ಆರೋಪ ಪಟ್ಟಿ
ಅಂಗಾಂಶ ಪರೀಕ್ಷೆ ಇಲ್ಲದೆಯೇ ನಕಲಿ ದಾಖಲೆ ಸೃಷ್ಟಿ
ಸಿ.ಟಿ.ಸ್ಕ್ಯಾನ್ಗಳ ಸಂಖ್ಯೆ ಹೆಚ್ಚಿಸಿ ಅವ್ಯವಹಾರ
ಔಷಧಗಳ ದಾಖಲೆ ಇಡದೆ ಅವ್ಯವಹಾರ
ಕ್ಯಾನ್ಸರ್‌ಗೆ ಸಂಬಂಧಪಡದ ಇಂಜೆಕ್ಷನ್ ನೀಡಿಕೆ
ಸತ್ತ ನಂತರವೂ ಚಿಕಿತ್ಸೆ ನೀಡಿ ಹಣ ಪೀಕಿದ ಆರೋಪ
ವರದಿ: ಜಿ.ಮಹಾಂತೇಶ್ ಜೊತೆ ರಮೇಶ್, ಸುವರ್ಣನ್ಯೂಸ್
